ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯು ನಡೆಸುವ ನರ್ಸಿಂಗ್ ಸೂಪರಿಟೆಂಡೆಂಟ್ ಪರೀಕ್ಷೆಗಳ ವೇಳೆ ಜನಿವಾರ, ಮಂಗಳಸೂತ್ರವನ್ನು ಹಾಕುವಂತಿಲ್ಲ. ಧರಿಸಿದ್ದರೆ ತೆಗಿಸಲಾಗುವುದು ಎಂಬ ಸೂಚನೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ “ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ತೆಗೆಸುವುದಿಲ್ಲ” ಎಂದು ರೈಲ್ವೇ ಮಂಡಳಿ ಅಧಿಸೂಚನೆ ಹೊರಡಿಸಿದೆ.
ಎಪ್ರಿಲ್ 28, 29 ಮತ್ತು 30 ರಂದು ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ ವೇಳೆ ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳು ಧಾರ್ಮಿಕ ಸಂಕೇತಗಳಾದ ಜನಿವಾರ, ಮಂಳಸೂತ್ರ, ಮೊದಲಾದವುಗಳನ್ನು ಧರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಈ ಸೂಚನೆಗೆ ವಿರೋಧ ವ್ಯಕ್ತವಾಗಿತ್ತು.
ಇದನ್ನು ಓದಿದ್ದೀರಾ? ರೈಲ್ವೆ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ತೆಗೆಯಲು ಸೂಚನೆ; ವಿಎಚ್‌ಪಿ ಆಕ್ರೋಶ
ರೈಲ್ವೇ ಇಲಾಖೆಯು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಾರಣ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ವಿಚಾರದಲ್ಲಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

“ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು. ಇದೇ ಅವರ ಮುಖವಾಡ. ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಬೇಕು ಎಂದು ಹೇಳಿರುವುದು ಸರಿಯಲ್ಲ. ಇವುಗಳನ್ನು ಪರಿಶೀಲನೆ ಮಾಡಲಿ. ಆದರೆ ಅದನ್ನು ತೆಗೆಸುವುದು ಸರಿಯಲ್ಲ. ಈ ಆದೇಶವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದರು.
ಈ ಬಗ್ಗೆ ತೀವ್ರ ಚರ್ಚೆಯಾಗುತ್ತಿದ್ದಂತೆ, “ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದು, ಪ್ರವೇಶ ನೀಡಬೇಕು” ಎಂದು ನೂತನ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ.
