ಹಿಂದುಳಿದ ವರ್ಗಗಳ ನಾಯಕರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ರಾಯಚೂರು ಜಿಲ್ಲೆಯಲ್ಲಿಯೇ ಘೋಷಣೆ ಮಾಡಬೇಕು ಎಂದು ಮಾದಿಗ ಮೀಸಲಾತಿ ಐಕ್ಯ ಹೋರಾಟ ಸಮಿತಿ ಸಂಚಾಲಕ ಎಂ ವಿರೂಪಾಕ್ಷಿ ಹೇಳಿದರು.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಏಳು ಜನ ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿ ಎರಡು ತಿಂಗಳು ಗತಿಸಿದೆ. ಆದರೆ ರಾಜ್ಯ ಸರ್ಕಾರ ಮೀಸಲಾತಿ ವರ್ಗೀಕರಣವನ್ನು ಸ್ವಾಗತಿಸಿ ಸುಮ್ಮನೆ ಕುಳಿತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿಯೇ ಮೀಸಲಾತಿ ವರ್ಗೀಕರಣಕ್ಕೆ ಅಗತ್ಯವಿರುವ ದತ್ತಾಂಶವಿದೆ ಎಂದು ಈಗಾಗಲೇ ಅನೇಕ ತಜ್ಞರು ಹೇಳುತ್ತಿದ್ದಾರೆ. ನ್ಯಾಯಮೂರ್ತಿ ಸದಾಶಿವ ಆಯೋಗ, ಕಾಂತರಾಜ್ ಸಮಿತಿ ಸೇರಿದಂತೆ ಅನೇಕರು ಹೇಳಿರುವುದು ವರದಿಗಳಿವೆ. ಕಾಂಗ್ರೆಸ್ ಸರ್ಕಾರ ಇನ್ನೊಬ್ಬರ ಪ್ರಭಾವಕ್ಕೆ ಗುರಿಯಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಪ್ರತ್ಯೇಕ ಕಾಲಂಗಳಲ್ಲಿ ಗಣತಿ ಮಾಡಲಾಗಿದೆ. ಗೊಂದಲವಾಗುವ ಪ್ರಶ್ನೆಯೇ ಇಲ್ಲ. ಕುಂಟುನೆಪ ಹೇಳದೇ ಸಿಂಧನೂರು, ಮಾನ್ವಿ ಮತ್ತು ರಾಯಚೂರು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿಯೇ ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕು. ಇಲ್ಲದೇ ಹೋದಲ್ಲಿ ಹೋರಾಟದ ಬಿಸಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, ಒಳಮೀಸಲಾತಿ ವರ್ಗೀಕರಣದಿಂದ ಕೇವಲ ಮಾದಿಗ ಸಮುದಾಯಕ್ಕೆ ಮಾತ್ರ ಅನುಕೂಲವಾಗುವದಿಲ್ಲ. ಎಲ್ಲ ಸಮುದಾಯಗಳಿಗೂ ಅನುಕೂಲವಾಗುತ್ತದೆ. ಒಳ ಮೀಸಲಾತಿ ಹೋರಾಟ ಯಾವುದೇ ಒಂದು ಪಕ್ಷ, ವ್ಯಕ್ತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳ ಪರವಾಗಿ ಮಾದಿಗ ಸಮಾಜ ಹೋರಾಟ ನಡೆಸುತ್ತಿದೆ. ಮೀಸಲಾತಿ ವರ್ಗೀಕರಣ ಕುರಿತಂತೆ ಸರ್ಕಾರ ವಿಳಂಬವಿಲ್ಲದೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಹಿಂದೂ ಮಾಲೀಕತ್ವದ ಶಾಲೆಗಳಿಗೆ ಮಾತ್ರ ಮಕ್ಕಳನ್ನು ಕಳುಹಿಸಬೇಕು; ದ್ವೇಷ ಬಿತ್ತಿದ ಪ್ರೊಫೆಸರ್!
ಈ ಸಂದರ್ಭದಲ್ಲಿ ರವೀಂದ್ರ ಜಲ್ದಾರ, ಪಿ.ಯಲ್ಲಪ್ಪ, ಜೆ.ಬಿ.ರಾಜು,ಕೆ.ಪಿ.ಅನಿಲ್‌ಕುಮಾರ, ರಾಘವೇಂದ್ರ ಬೋರೆಡ್ಡಿ ,ಎಸ್.ರಾಜು ಸೇರಿ ಅನೇಕರಿದ್ದರು.
