ಉಡುಪಿ ಜಿಲ್ಲಾಡಳಿತದ ದಲಿತ ವಿರೋಧಿ ನೀತಿ ಖಂಡಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಿದ ಬೆಳವಣಿಗೆ ನಡೆದಿದೆ.
ಹನೆಹಳ್ಳಿ ಶೂಟೌಟ್ ಪ್ರಕರಣ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಪೋಲಿಸ್ ಸ್ಟೇಷನ್‌ಗಳಲ್ಲಿ ದಲಿತ ದೌರ್ಜನ್ಯ ಕೇಸುಗಳಿಗೆ ಕೌಂಟರ್ ಕೇಸು ಹಾಕುತ್ತಿರುವ ಬಗ್ಗೆ ಗುರುವಾರ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ಟರ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ದೂರು ನೀಡಿ ಚರ್ಚಿಸಿದರು.
ದಲಿತ ಮುಖಂಡರ ಮಾತು ಆಲಿಸಿ ಸಮಾಧಾನ ಪಡಿಸಿ ಮಾತನಾಡಿದ ಲಕ್ಷೀ ಹೆಬ್ಬಾಳ್ಕರ್, ಸೆಪ್ಟೆಂಬರ್ ಎರಡನೇ ವಾರದಲ್ಲಿ ದಲಿತರ ಕುಂದುಕೊರತೆಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಮಂಜುನಾಥ ಗಿಳಿಯಾರು, ಶ್ಯಾಮಸುಂದರ್ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಶಿವಾನಂದ ಬಿರ್ತಿ, ಗೋಪಾಲ ಕೋಟ ಮೊದಲಾದವರು ಉಪಸ್ಥಿತರಿದ್ದರು.