ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಈ ತೀರ್ಪನ್ನು ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಸೆ.12ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರದಲ್ಲಿನ ಬೃಹತ್ ತಮಟೆ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳಿಗೆ ಒಳ ಮೀಸಲಾತಿ ನೀಡಲು ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಆದರೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ ಎಂದರು.
ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಈ ತೀರ್ಪನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಹೇಳಿದೆ. ಆದರೆ ತೀರ್ಪು ನೀಡಿ ಒಂದು ತಿಂಗಳಾದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದು ಖಂಡನೀಯ ಎಂದು ಕಿಡಿಕಾರಿದರು.
ಈ ಹಿಂದೆ ಪಂಜಾಬ್, ಹರಿಯಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಸರ್ಕಾರಗಳು ಒಳ ಮೀಸಲಾತಿ ನೀಡಲು ಮುಂದಾಗಿದ್ದವು. ಆದರೆ ಇದಕ್ಕೆ ಸ್ಥಳೀಯ ನ್ಯಾಯಾಲಯಗಳು ತಡೆಯೊಡ್ಡಿತ್ತು. ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಪರಿಶಿಷ್ಟ ಜಾತಿಯಲ್ಲಿರುವ ಉಪ ಜಾತಿಗಳ ಹಿಂದುಳಿಯುವಿಕೆ ಮುಂದುವರೆಯಿತು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಮೇಲೆಯೂ ಹಿಂದೆ ಒತ್ತಡ ಹಾಕಿ ಹೋರಾಟ ನಡೆಸುತ್ತಾ ಬಂದಿದೆ. ಒಳ ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ತರಬೇಕೆಂದು ಮುಖ್ಯಮಂತ್ರಿ ಹೇಳಿದ್ದರು. ಈ ಎಲ್ಲ ಗೊಂದಲಗಿಳಿಗೆ ಇದೀಗ ಸುಪ್ರೀಂ ಕೋರ್ಟ್ ತೀರ್ಪು ನೀಡಿ ರಾಜ್ಯಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರವಿದೆ ಎಂದು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಒಳ ಮೀಸಲಾತಿ ನೀಡಲು ಮುಂದಾಗಬೇಕಿದೆ ಎಂದರು.
ಕೋರ್ಟ್ ತೀರ್ಪು ನೀಡಿ ಒಂದು ತಿಂಗಳು ಗತಿಸಿದೆ. ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಸೆ.12ರಂದು ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಲೊಯೋಲಾ ಶಾಲಾಡಳಿತದಿಂದ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಚೆಕ್ ವಿತರಣೆ
ಸುದ್ದಿಗೋಷ್ಠಿಯಲ್ಲಿ ಕುರುಮಂತೆಪ್ಪ ಕಟ್ಟಿಮನಿ, ರಾಮಣ್ಣ ಸಾಸಲಮರಿ, ಶಿವರಾಜ ರುದ್ರಾಕ್ಷಿ, ರಮೇಶ ಬೋಸ್ಲೆ, ಹನುಮೇಶ, ಜಂಬಣ್ಣ, ಸುರೇಶ ಸೇರಿದಂತೆ ಇತರರು ಇದ್ದರು.
