ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾಗಿ ಮುಂದಿನ ಶಿಕ್ಷಣಕ್ಕೆ ಅಣಿಯಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪಾಲಕರು ಡೊನೇಷನ್ ಹಾವಳಿ ಎದುರಿಸುತ್ತಿದ್ದು, ಕೂಡಲೇ ಶಿಕ್ಷಣ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಈ ಕುರಿತು ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯ್ ಕುಮಾರ್ ಅಜಮನಿ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಡೊನೇಷನ್ ಹಾವಳಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಕನಸು ಕಮರುತ್ತಿದೆ. ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡಬೇಕಾದ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಹಣ ವಸೂಲಿ ಮಾಡುತ್ತಿವೆ. ಡೊನೇಷನ್ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದರೂ ಶಿಕ್ಷಣ ಇಲಾಖೆ ಯಾವುದೇ ಕ್ರಮಕೈಗೊಳ್ಳದೇ ಮೌನವಹಿಸಿದೆ” ಎಂದು ಆರೋಪಿಸಿದರು.
ಖಾಸಗಿ ಕಾಲೇಜುಗಳು ರೋಸ್ಟರ್ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಬೇಕು. ಸರಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಿಸಿ ಮೂಲಭೂತ ಸೌಲಭ್ಯ ಒದಗಿಸಬೇಕು. ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಪ್ರತಿನಿಧಿಗಳು, ಪೋಷಕರನ್ನು ಒಳಗೊಂಡ ಸಮಿತಿ ರಚಿಸಿ ಚರ್ಚಿಸಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಸಮಿತಿ ರಚಿಸಬೇಕು. ಕಾಲೇಜುಗಳ ಮಕ್ಕಳ ಸಂಖ್ಯೆ ಪ್ರಕಾರ ಸಂಸ್ಥೆಯ ಆದಾಯ ಕ್ರೋಢಿಕರಿಸಿ ಇಲಾಖೆಯೇ ಶುಲ್ಕ ನಿಗದಿ ಮಾಡಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿದರು.
“ವಿದ್ಯಾರ್ಥಿ ಹಾಗೂ ಪಾಲಕರಿಗೆ ಡೊನೇಷನ್ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಉಚಿತ ಸಹಾಯವಾಣಿ ಆರಂಭಿಸಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ವಿದ್ಯಾರ್ಥಿಗಳ ಪೋಷಕರ ಸಹಭಾಗಿತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ಲಾನ್ ಬಿ ಬಗೆಗಿನ ಮಾತು ಮತ್ತು ನಾಯಕನ ಹಿಂದಿನ ನಾಯಕ
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಆನಂದ ಮುದೂರ, ಮಾದೇಶ ಛಲವಾದಿ, ಯಾಶಿನ್ ಇನಾಮದಾರ, ಯುವರಾಜ್ ಓಲೇಕಾರ್, ಅಜಯ್ ರಾಥೋಡ್, ಮಹಾಂತೇಶ್ ಛಲವಾದಿ, ಯಮನುರಿ ಮಾದರ್ ಇದ್ದರು.