ಗೊಲ್ಲ ಸಮುದಾಯದವರು ವಾಸಿಸುವ ಬೀದಿಗೆ ಹೋಗಿದ್ದಕ್ಕೆ ದಲಿತ ಯುವಕನ ಮೇಲೆ ಗೊಲ್ಲ ಸಮುದಾಯದವರು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಎಂ.ಸಿ ಹಳ್ಳಿ ಗ್ರಾಮದ ಮಾದಿಗ ಸಮುದಾಯದ ಯುವಕ ಮಾರುತಿ ಎಂಬವರ ಮೇಲೆ ಗೇರುಮರಡಿ ಗ್ರಾಮದ ಗೊಲ್ಲ ಸಮುದಾಯದ ಗುಂಪೊಂದು ಹಲ್ಲೆ ಮಾಡಿದೆ ಎಂದು ತಿಳಿದುಬಂದಿದೆ.
ಜೆಸಿಬಿ ನಿರ್ವಹಣೆ ಕೆಲಸ ಮಾಡುತ್ತಿದ್ದ ಮಾರುತಿ, ಇತ್ತೀಚೆಗೆ ಗೇರುಮರಡಿ ಗ್ರಾಮದ ರವಿ ಎಂಬವರ ಹಳೆ ಮನೆ ಕೆಡವುವ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುವಾಗ ಜೆಸಿಬಿ ತಗುಲಿ ಡಿಶ್ ವೈರ್ ತುಂಡಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಆತನ ಮೇಲೆ ಹಲ್ಲೆ ಮಾಡಲಾಗಿದೆ.
ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ಬಂದ 30-40 ಜನರ ಗುಂಪು, ಮಾದಿಗ ಸಮುದಾಯವರು ನಮ್ಮ ಬೀದಿಗೆ ಯಾಕೆ ಬಂದಿದ್ದೀರಿ. ನೀವು ಬಂದರೆ ನಮ್ಮ ದೇವರಿಗೆ ಮೈಲಿಗೆಯಾಗುತ್ತದೆ ಎಂದು ಜೆಸಿಬಿ ಮೇಲೆ ಹತ್ತಿ ಹಲ್ಲೆ ಮಾಡಿದೆ. ಕೆಲವರು ಚಪ್ಪಲಿ ಹಾಕಿದ್ದ ಕಾಲಿನಿಂದ ಒದ್ದಿದ್ದಾರೆ ಎಂದು ವರದಿಯಾಗಿದೆ.
ತನ್ನ ಮೇಲಾದ ಹಲ್ಲೆಯ ಬಗ್ಗೆ ಮಾರುತಿ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಗಾಯಗೊಂಡು ಅಸ್ವಸ್ಥನಾಗಿ ಕುಸಿದು ಬಿದ್ದರೂ, ಯಾರು ನೀರು ಕೊಟ್ಟಿಲ್ಲ. ಅಲ್ಲದೆ, ಜೇಬಿನಲ್ಲಿದ್ದ 20,000 ರೂಪಾಯಿಯನ್ನು ಕಸಿದುಕೊಂಡಿದ್ದಾರೆ. 1 ಲಕ್ಷ ರೂ. ದಂಡ ಕಟ್ಟಬೇಕು. ಇಲ್ಲವಾದಲ್ಲಿ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಾರುತಿ ನೀಡಿದ ದೂರಿನ ಆಧಾರದ ಮೇಲೆ ಗೊಲ್ಲ ಸಮುದಾಯದ 15 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.