ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸಿದಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನಲ್ಲಿ ನಡೆದಿದೆ.
ಕಮಲನಗರ ತಾಲ್ಲೂಕಿನ ಬೇಡಕುಂದಾ ಗ್ರಾಮದ ಸುಮೀತ್ (19) ಮೃತ ಯುವಕ.
ಬಿಎಸ್ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ ಸುಮೀತ್ ಕಮಲನಗರ ತಾಲ್ಲೂಕಿನ ಗ್ರಾಮವೊಂದರ ಮೇಲ್ಜಾತಿಯ ಬಾಲಕಿಯನ್ನು ಸುಮಿತ್ ಪ್ರೀತಿಸುತಿದ್ದ. ಡಿ.5 ರಂದು ಭೇಟಿ ಮಾಡಲು ಹುಡುಗಿಯ ಗ್ರಾಮಕ್ಕೆ ತೆರಳಿದ ವೇಳೆ ಸುಮೀತ್‌ನನ್ನು ಮನೆಯಲ್ಲಿ ಕೂಡಿ ಹಾಕಿ ಹುಡುಗಿಯ ತಂದೆ, ಸಹೋದರ ಹಾಗೂ ಸಂಬಂಧಿಕರು ಮನಬಂದಂತೆ ಥಳಿಸಿದ್ದಾರೆ. ಬಳಿಕ ಹುಡುಗನ ಪೋಷಕರಿಗೆ ವಿಷಯ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸುಮೀತ್‌ನನ್ನು ಪೋಷಕರು ಮಹಾರಾಷ್ಟ್ರದ ಉದಗೀರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಲಾತೂರ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಯುವಕ ಕೊನೆಯುಸಿರೆಳೆದಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೀದರ್ ಬಂದ್ : ನಾಳೆ ಶಾಲೆ, ಕಾಲೇಜುಗಳಿಗೆ ರಜೆ
ಘಟನೆ ಸಂಬಂಧ ಠಾಣಾ ಕುಶನೂರ ಠಾಣೆಯಲ್ಲಿ ಎಸ್ಸಿ , ಎಸ್ಟಿ ಜಾತಿ ದೌರ್ಜನ್ಯ ಕಾಯ್ದೆಯಡಿ ಬಾಲಕಿಯ ತಂದೆ, ಸಹೋದರನ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ‘ಈದಿನ.ಕಾಮ್‘ ಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆ ಎದುರು ಪ್ರತಿಭಟನೆ: ಲಾತೂರ್ ಆಸ್ಪತ್ರೆಯಿಂದ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಮೃತದೇಹ ತಂದು ಆಸ್ಪತ್ರೆ ಎದುರುಗಡೆ ಮೃತ ಯುವಕನ ಪೋಷಕರು, ವಿವಿಧ ಸಂಘಟನೆಗಳ ಮುಖಂಡರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸಿಂಧು ಎಚ್.ಎಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.