ಇತ್ತೀಚೆಗೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಎಂಬ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿ ದಲಿತ ಯುವಕನ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸಂತ್ರಸ್ಥ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ದಾದಾ ಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ) ಮನವಿ ಸಲ್ಲಿಸಲಾಯಿತು.
ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ʼಸಂಗನಾಳ ಗ್ರಾಮದಲ್ಲಿ ಆ.17ರಂದು ಯಮನೂರಪ್ಪ ಹರಿಜನ ಎಂಬ ಯುವಕನಿಗೆ ಮುದಕಪ್ಪ ಹಡಪದ ಕ್ಷೌರಿಕ ಮಾಡಲು ನಿರಾಕರಿಸಿದ್ದು, ಇದನ್ನು ಪ್ರಶ್ನಿಸಿದ ಯಮನೂರಪ್ಪನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಅಸ್ಪ್ರಶ್ಯತೆ ಜೀವಂತಿಗೆ ಸಾಕ್ಷಿಯಾದ ಘಟನೆʼ ಎಂದರು.
ʼಗ್ರಾಮೀಣ ಭಾಗದಲ್ಲಿ ಜಾತಿಯ ಕಾರಣಕ್ಕೆ ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದರೂ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ನೀಡಲು ಸಮಾಜ ಕಲ್ಯಾಣ ಇಲಾಖೆಯ ನಿಶ್ಕ್ರಿಯವಾಗಿದೆ. ಕೂಡಲೇ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಸಂತ್ರಸ್ಥರಿಗೆ ನ್ಯಾಯ ಒದಗಿಸಬೇಕುʼ ಎಂದು ಒತ್ತಾಯಿಸಿದರು.
ಈ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ನಂಜಲದಿನ್ನಿ, ಉಪಾಧ್ಯಕ್ಷ ಎಂ.ಮನೋಹರ ಸಿರವಾರ, ಪ್ರಧಾನ ಕಾರ್ಯದರ್ಶಿ ರಾಜು ಬೊಮ್ಮನಾಳ, ಮುಖಂಡರಾದ ಚಂದ್ರಪ್ಪ ಕವಿತಾಳ, ಜಮದಗ್ನಿ ಗೋನಾಳ ಇದ್ದರು.
