ಯಾದಗಿರಿ ನಗರದ ದಕ್ಷ ಹಾಗೂ ನಿಷ್ಠಾವಂತ ಪೊಲೀಸ್ ಇನ್ಸಪೆಕ್ಟರ್ ಪರಶುರಾಮ್ ಅವರ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಹಾಗೂ ಅವರ ಪುತ್ರನನ್ನು ಈವರೆಗೆ ಬಂಧಿಸದಿರುವುದನ್ನು ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮವಾದದ ಮುಖಂಡರು ಪ್ರತಿಭಟನೆ ನಡೆಸಿದರು.
“30 ಲಕ್ಷ ರೂ. ಲಂಚದ ಬೇಡಿಕೆ ಕಾರಣರಾದವರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದ್ದರೂ ಬಂಧಿಸಿಲ್ಲ. ಇದು ಖಂಡನೀಯ. ಈ ಪ್ರಕರಣದ ಅಮೂಲಾಗ್ರ ತನಿಖೆಗೆ ಸಿಬಿಐಗೆ ಒಪ್ಪಿಸಿ ಆರೋಪಿಗಳನ್ನು ತಕ್ಷಣ ಬಂಧಿಸಿ ಶಿಕ್ಷಿಸಬೇಕು” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಶರಣು ಎಸ್. ನಾಟೇಕರ್, “ಪಿಎಸ್‌ಐ ಪರಶುರಾಮ್ ಇವರ ಸಾವಿಗೆ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಅವರ ಪುತ್ರ ಪಂಪಣಗೌಡ ಕಾರಣರಾಗಿದ್ದು, 30 ಲಕ್ಷ ರೂ. ಬೇಡಿಕೆ ಇಟ್ಟಿದ್ದರಿಂದ ಅವರು ಹೌಹಾರಿ ಒತ್ತಡಕ್ಕೂಳಗಾಗಿ, ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ. ವಿನಾಕಾರಣ ಏಕಾಏಕಿ ವರ್ಗಾವಣೆ ಮಾಡಿದ್ದರಿಂದ ಅದನ್ನು ರದ್ದು ಮಾಡಲು 30 ಲಕ್ಷ ರೂ ಬೇಡಿಕೆ ಇಟ್ಟಿದ್ದರಿಂದ ಈ ಘಟನೆ ನಡೆದಿದೆ” ಎಂದು ತಿಳಿಸಿದರು.

“ದಕ್ಷ ಅಧಿಕಾರಿಯಾಗಿದ್ದ ಪರಶುರಾಮ್ ಅವರು ಯಾದಗಿರಿ ಠಾಣೆಗೆ ವರ್ಗವಾಗಿ ಬಂದ ಮೇಲೆ ನಗರದಲ್ಲಿ ಅಕ್ರಮಗಳನ್ನು ಮಟ್ಟಹಾಕಿ ಭ್ರಷ್ಟರಿಗೆ ಸಿಂಹಸ್ವಪ್ನರಾಗಿ ಕೆಲಸ ಮಾಡಿ ನಗರದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದರು. ಯಾವುದೇ ರಾಜಕೀಯ ಮಾಡದೇ ಯಾರ ಪಕ್ಷಪಾತವನ್ನೂ ಮಾಡದೇ ನ್ಯಾಯ ಪಕ್ಷಪಾತಿಯಾಗಿ ಕೆಲಸ ಮಾಡಿ ಶ್ರೀಸಾಮಾನ್ಯರಿಂದ ಸೈ ಎನಿಸಿಕೊಂಡ ದಕ್ಷ ಅಧಿಕಾರಿಯಾಗಿದ್ದರು” ಎಂದು ಶರಣು ಎಸ್. ನಾಟೇಕರ್ ತಿಳಿಸಿದರು.
“ಅವರ ಮರಣದಿಂದಾಗಿ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದರೆ ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಇಲ್ಲವಾದಲ್ಲಿ ಯಾದಗಿರಿ ನಗರ ಬಂದ್ ಮಾಡಿ ಉಗ್ರ ಹೋರಾಟ ರೂಪಿಸಲಾಗುವುದು” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಭೀಮರಾಯ ಸಿಂಧಿಗೇರಿ, ಶಿವಶಂಕರ ಹೊಸಮನಿ, ಶಿವಶರಣಪ್ಪ ವಾಡಿ, ಭೀಮರಾಯ್ ಕಾಗಿ, ಖಂಡಪ್ಪ ಸಾಹುಕಾರ, ಮಾದೇವಪ್ಪ ಗುರುಸುಣಿಸಿ, ಮಲ್ಲಪ್ಪ ಲಂಡನಕರ್, ಸಿದ್ರಾಮ್ ಭಂಡಾರಿ, ಶರಣಪ್ಪ ಮಮ್ಮದರ್, ಮಾರುತಿ,
ಮಹಮ್ಮದ್ ಸಲೀಮ್, ಪವಿತ್ರ, ಸುರೇಖಾ ಇನ್ನಿತರರು ಉಪಸ್ಥಿತರಿದ್ದರು.
