ಸಮಾಜದ ಎಲ್ಲ ಸ್ಥರದ ಜನರಿಗೆ ಅನುಕೂಲವಾಗಲೆಂದು ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಲೆಂದು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವೆ. ಈಗಾಗಲೇ, ಮೂರು ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇಂದು ನಾಲ್ಕನೇ ಗ್ಯಾರಂಟಿ ‘ಗೃಹ ಲಕ್ಷ್ಮಿ’ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ನಡೆದ ಗೃಹ ಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಮಹಿಳೆಯರು ಆರ್ಥಿಕವಾಗಿ ಸಬಲಗೊಂಡರೆ, ಇಡೀ ಕುಟುಂಬ ಹಾಗೂ ಆ ಮೂಲಕ ದೇಶವೇ ಸಬಲಗೊಳ್ಳುತ್ತದೆ. ಕುಟುಂಬದ ದೈನಂದಿನ ಖರ್ಚು ವೆಚ್ಚಗಳು ಹಾಗೂ ಅನಿರೀಕ್ಷಿತ ಸಂದರ್ಭಗಳಲ್ಲಿ ಬರುವಂತಹ ಖರ್ಚು-ವೆಚ್ಚಗಳನ್ನು ನಿಭಾಯಿಸುವುದು ಮಹಿಳೆಯರಿಗೆ ಪ್ರತಿದಿನದ ಸವಾಲಾಗಿರುತ್ತದೆ. ಇಂತಹ ಯಜಮಾನಿಗೆ ಗೌರವವನ್ನು ಸೂಚಿಸಿ ಆಕೆಯನ್ನು ಅರ್ಥಿಕವಾಗಿ ಸಬಲಳನ್ನಾಗಿ ಮಾಡಲು ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ” ಎಂದರು.
“ಯೋಜನೆಯಡಿ 2,000 ರೂ.ಗಳನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯು ದೇಶದಲ್ಲಿಯೇ ಅತ್ಯಂತ ವಿನೂತನ ಮತ್ತು ವಿಶಿಷ್ಟವಾದ ಯೋಜನೆಯಾಗಿದೆ. ಮಹಿಳೆಯು ತಾಯಿ, ಅಕ್ಕ, ತಂಗಿ, ಪತ್ನಿ ಹೀಗೆ ಹಲವಾರು ರೂಪಗಳಲ್ಲಿ ಪ್ರೀತಿಯ ಧಾರೆಯನ್ನೆರೆಯುತ್ತಾಳೆ. ಅಲ್ಲದೆ ತನ್ನ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಕುಟುಂಬದ ಶ್ರೇಯಸ್ಸಿಗೆ ಶ್ರಮಿಸುತ್ತಾಳೆ” ಎಂದರು.
ಜಿಲ್ಲಾಧಿಕಾರಿ ಡಾ.ಎಂ.ಎ ವೆಂಕಟೇಶ್ ಮಾತನಾಡಿ, “ರಾಜ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಇದಾಗಿದೆ. ಎಲ್ಲರಿಗೂ ಸಮಪಾಲು ಸಮಬಾಳು ಧೈಯೋದ್ದೇಶದಿಂದ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಶಕ್ತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗರ್ಭದಿಂದ ಮರಣದವರೆಗೂ ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಪ್ರೀತಿ ವಾತ್ಸಲ್ಯ ನೀಡುವ ಮಹಿಳೆ ಒಂದಲ್ಲ ಒಂದು ರೀತಿ ಶೋಷಣೆಗೆ ಒಳಗಾಗಿದ್ದಾರೆ. ಅವರಿಗೆ ಶಕ್ತಿ ನೀಡುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್ ಬಸವಂತಪ್ಪ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ ಸಿಇಒ ಸುರೇಶ್ ಇಟಾಳ್ ಮೇಯರ್ ವಿನಾಯಕ ಪೈಲ್ವಾನ್, ಎಸಿ ದುರ್ಗಾಶ್ರೀ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಕೆ ಚಮನ್ ಸಾಬ್, ಶಾಮನೂರು ಬಸವರಾಜ್, ಎನ್ ಜಿ ಪುಟ್ಟಸ್ವಾಮಿ ಪಾಲಿಕೆ ಆಯುಕ್ತೆ ರೇಣುಕಾ,ಮಹಿಳಾ ಉಪನಿರ್ದೇಶಕಿ ವಾಸಂತಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಚಂದ್ರ ಮತ್ತಿತರರಿದ್ದರು.