ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ದಲಿತ ಯುವಕನೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ದಾವಣಗೆರೆ ನಗರದಲ್ಲಿ ವರದಿಯಾಗಿದೆ.
ಘಟನೆಯನ್ನು ಖಂಡಿಸಿರುವ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದಾವಣಗೆರೆ ನಗರದ ಜಾಲಿನಗರ ನಿವಾಸಿ ಶ್ರೀನಿವಾಸ್ ಎಂಬುವವರ ಮೇಲೆ ಭಾನುವಾರ ಸಂಜೆ ಗುಂಪೊಂದು ಹಲ್ಲೆ ನಡೆಸಿದ್ದು, ಆತ ಅಸ್ವಸ್ಥಗೊಂಡು ಮೂರ್ಚೆ ಹೋದ ಬಳಿಕ ದಾಳಿಕೋರರು, ಅವರನ್ನು ನಿರ್ಜನ ಪ್ರದೇಶದಲ್ಲಿ ಬಿಸಾಕಿ ತೆರಳಿದ್ದರು. ಪ್ರಜ್ಞೆ ಬಂದ ನಂತರ ಯುವಕ ಪೋಷಕರಿಗೆ ಕರೆ ಮಾಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.
“ಇದೊಂದು ನೈತಿಕ ಪೊಲೀಸ್ಗಿರಿಯಾಗಿದೆ. ಯುವಕನು ಅನುಚಿತವಾಗಿ ವರ್ತಿಸಿದ್ದರೆ, ಆತನನ್ನು ಪೊಲೀಸರಿಗೆ ಒಪ್ಪಿಸಬೇಕಾಗಿತ್ತು ಅಥವಾ ಆತನ ವಿರುದ್ಧ ದೂರು ದಾಖಲಿಸಬೇಕಾಗಿತ್ತು. ಬದಲಾಗಿ, ಗುಂಪೊಂದು ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದೆ. ಹಲ್ಲೆಯ ನಂತರ ದಲಿತ ಯುವಕನ ವಿರುದ್ಧವೇ ಪೊಲೀಸರಿಗೆ ದೂರು ನೀಡಲಾಗಿದೆ. ಇದೊಂದು ಷಡ್ಯಂತ್ರವಾಗಿದ್ದು, ದಾಳಿಕೋರರನ್ನು ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ
“ಹಲ್ಲೆಗೊಳಗಾದ ಯುವಕನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿದ್ದು, ಶೀಘ್ರದಲ್ಲೇ ಮದುವೆ ನಡೆಯಲಿದೆ. ಆತನ ಮೇಲಿನ ಆರೋಪಗಳು ಆಧಾರರಹಿತ” ಎಂದು ಪೋಷಕರು ತಿಳಿಸಿದ್ದಾರೆ.
ಸಂತ್ರಸ್ತನನ್ನು ಶಾದಿ ಮಹಲ್ ಪ್ರದೇಶಕ್ಕೆ ಎಳೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆಂದು ಸ್ಥಳೀಯ ಆರೋಪಗಳು ಕೇಳಿಬಂದಿವೆ.