ಕಾರ್ಪೊರೇಟ್ ಪರ ರೈತ ವಿರೋಧಿ ಕೃಷಿ ನೀತಿಗಳನ್ನು ಕೈಬಿಡಲು ಒತ್ತಾಯಿಸಿ ರಾಷ್ಟ್ರಮಟ್ಟದಲ್ಲಿ ದೇಶದಾದ್ಯಂತ ಎಐಕೆಕೆಎಂಎಸ್ ನಡೆಸುತ್ತಿರುವ ಹೋರಾಟದ ಅಂಗವಾಗಿ ದಾವಣಗೆರೆಯಲ್ಲಿ ಜಿಲ್ಲಾ ಘಟಕ ನಗರದ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಮನವಿ ನೀಡಿ, ರೈತರ ಮತ್ತು ರೈತ ಕೂಲಿ ಕಾರ್ಮಿಕರ ಬೆಂಬಲಕ್ಕೆ ಸರ್ಕಾರಗಳು ನಿಲ್ಲಲು ಒತ್ತಾಯಿಸಿತು.
ವಿವಿಧ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ ಎಐಕೆಕೆಎಂಎಸ್ ಮುಖಂಡರು ಇಡೀ ದೇಶಾದ್ಯಂತ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ಅತ್ಯಂತ ಸಂಕಟಮಯ ಜೀವನ ನಡೆಸುತ್ತಿದ್ದಾರೆ. ಸಾಲದ ಹೊರೆಯಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕೃಷಿಯ ಒಳಸುರಿಗಳಾದ ಬೀಜ, ಗೊಬ್ಬರ, ಕೀಟನಾಶಕಗಳಂತಹ ಬೆಲೆಗಳು ಗಗನಕ್ಕೆ ಏರುತ್ತಿದ್ದು, ಅದಕ್ಕೆ ಪ್ರತಿಯಾಗಿ ರೈತರ ಉತ್ಪನ್ನಗಳಿಗೆ ಯಾವುದೇ ಸರ್ಕಾರಗಳು ಲಾಭದಾಯಕ ಬೆಲೆ ದೊರಕದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈತನಿಗೆ ಅತ್ಯವಶ್ಯಕವಾಗಿ ಬೆಂಬಲ ಬೆಲೆಯಲ್ಲಿ ಖರೀದಿ ಅಗತ್ಯವಾಗಿದೆ. ಹಾಗಾಗಿ, ಸ್ವಾಮಿನಾಥನ್ ಕೃಷಿ ವರದಿಯಂತೆ C2+50 ಅನುಗುಣವಾಗಿ ಎಂ ಎಸ್ ಪಿ ಯನ್ನು ಕೃಷಿ ಉತ್ಪನ್ನಗಳಿಗೆ ನಿಗದಿಪಡಿಸಬೇಕು ಮತ್ತು ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯಬೇಕು ಎಂಬುದಾಗಿ ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಎಐಕೆಕೆಎಂಎಸ್ ಮುಖಂಡ ಮಧು ತೊಗಲೇರಿ, “ರೈತರ ಬೆನ್ನಿಗೆ ನಿಲ್ಲಬೇಕಾಗಿದ್ದ ಸರ್ಕಾರಗಳು ಅವರ ಮೇಲೆಯೇ ದೌರ್ಜನ್ಯ ಎಸಗಿವೆ. ಇಡೀ ದೇಶಕ್ಕೆ ಅನ್ನ ಕೊಡುವ ರೈತ ಇಂದು ಅತ್ಯಂತ ಸಂಕಷ್ಟಮಯ ಸ್ಥಿತಿ ಎದುರಿಸುತ್ತಿದ್ದಾನೆ. ಅವರ ಕೃಷಿ ಒಳಸುರಿಗಳ ಬೆಲೆಗಳು ಗಗನಕೇರಿದೆ. ಆದರೆ ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಸಾಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಹಾಗೂ ಹವಾಮಾನ ವೈಪರಿತ್ಯತೆಗಳ ಕಾರಣದಿಂದಲೂ ರೈತನು ನಷ್ಟ ಅನುಭವಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ರೈತನಿಗೆ ಬೆಂಬಲ ಬೆಲೆ ಮತ್ತು ಪರಿಹಾರದ ಅಗತ್ಯವಿದೆ” ಎಂದು ಹೇಳಿದರು.
“ಸರ್ಕಾರಗಳು ಈ ನಿಟ್ಟಿನಲ್ಲಿ ಭರವಸೆ ಒದಗಿಸಿಕೊಡಬೇಕು. ಹಾಗೂ 50-60 ವರ್ಷಗಳಿಂದ ಬಗರ್ ಹುಕುಂ ಜಮೀನುಗಳಲ್ಲಿ ಗೋಮಾಳದ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತ ಕೃಷಿಕರಿಗೆ ಹಕ್ಕು ಪತ್ರಗಳನ್ನು ಕೊಡಲೇಬೇಕು. ಅಲ್ಲದೆ ದಾವಣಗೆರೆಯ ಮಾಡಿಕೊಂಡ ವಿಭಾಗದಲ್ಲಿ ಸರ್ಕಾರದ ಆದೇಶವಿದ್ದರೂ ಇದುವರೆಗೂ ಬಗರ್ ಹುಕುಂ ಸಮಿತಿ ರಚನೆಯಾಗಿಲ್ಲ. ಇದಕ್ಕೆ ಶಾಸಕರು, ತಹಶೀಲ್ದಾರರು ಮತ್ತು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ರೈತ ಬೆಳೆಗಳನ್ನು ಅತ್ಯಂತ ಕನಿಷ್ಠ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾನೆ. ಆದರೆ ಅವುಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಉತ್ಪನ್ನಗಳು ಒಂದಕ್ಕೆ ನಾಲ್ಕುರಷ್ಟು ಬೆಲೆಗಳಿಸಿಕೊಳ್ಳುತ್ತಿವೆ. ಇಲ್ಲಿ ಮಧ್ಯವರ್ತಿಗಳು ದಲ್ಲಾಳಿಗಳು, ಖಾಸಗಿ ವ್ಯಾಪಾರ ಅತ್ಯಂತ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದು, ರೈತನಿಗೆ ಇದರ ಲಾಭ ನೇರವಾಗಿ ಸಿಗುವ ಹಾಗೆ ಮಾಡಿಕೊಡುವ ಅಗತ್ಯವಿದೆ. ಹಾಗಾಗಿ ‘ಸಂಪೂರ್ಣ ಸರ್ಕಾರಿ ವ್ಯಾಪಾರಿ’ ಪದ್ದತಿಯ ಅಗತ್ಯವಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರೈತ ಮುಖಂಡ ರಾಮಗೊಂಡನಹಳ್ಳಿ ನಾಗರಾಜ್, “ರೈತರು ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿ ಇಂದು ಜೀವನ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರಗಳು ಯಾವುದೇ ರೀತಿ ನೆರವು ನೀಡುತ್ತಿಲ್ಲ. ಇಂದು ರೈತರ ಸಂಕಷ್ಟವನ್ನು ನಿವಾರಿಸದೆ ಅವರ ಮೇಲೆ ದೌರ್ಜನ್ಯ ಮಾಡುವ ಕೆಲಸಗಳನ್ನು ವಿವಿಧ ಕಾಯ್ದೆಗಳ ಮೂಲಕ ಸರ್ಕಾರಗಳು ಮಾಡುತ್ತಿವೆ. ಕೃಷಿ ಕಾಯ್ದೆಗಳ ಮೂಲಕ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಕೃಷಿ ಕಾಯ್ದೆ 2023ರ ಮೂಲಕ ಕೃಷಿಕರ ಬೋರ್ವೆಲ್ ಗಳಿಗೆ ಮೀಟರ್ ಅಳವಡಿಸುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸಿ ಅವರನ್ನು ಸಾಲದ ಶೂಲಕ್ಕೆ ಸಿಲುಕಿಸುವ ಕ್ರಮಗಳು ಸರ್ಕಾರದಿಂದಾಗುತ್ತಿವೆ. ಇದನ್ನ ತಕ್ಷಣ ನಿಲ್ಲಿಸಿ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಮತ್ತು ರೈತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡಿ ರೈತರ ಮೇಲಿನ ಅನಾವಶ್ಯಕ ಕೇಸುಗಳನ್ನು ಹಿಂಪಡೆಯಬೇಕು. ಅರಣ್ಯದ ಇಲಾಖೆಯ ಕಿರುಕುಳ ತಪ್ಪಿಸಬೇಕು. ಸಂಪೂರ್ಣ ಸರ್ಕಾರಿ ವ್ಯಾಪಾರವನ್ನು ಜಾರಿಗೊಳಿಸಬೇಕು ಮತ್ತು ರೈತರ ಬೆಳೆಗಳಿಗೆ C2+50 ನಿಗದಿ ಆಗಬೇಕು. ಕೃಷಿ ಕಾರ್ಮಿಕರಿಗೆ ವರ್ಷಪೂರ್ತಿ ಉದ್ಯೋಗ ಮತ್ತು ಸಮರ್ಪಕ ವೇತನ ಜಾರಿಗೆ ತರಬೇಕು. ವಿದ್ಯುತ್ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳಬೇಕು. ರೈತರ ಸಾಲ ಮನ್ನಾ ಮಾಡಬೇಕು ಮತ್ತು 60 ವರ್ಷ ದಾಟಿದ ರೈತರಿಗೆ 10 ಸಾವಿರ ಮಾಸಿಕ ಪಿಂಚಣಿಯನ್ನು ನಿಗದಿಪಡಿಸಬೇಕು. ಮಳೆಯಿಂದ ಆಗಿರುವ ಬೆಳೆ ಹಾನಿಗೆ ಸೂಕ್ತ ಪರಿಹಾರ ಘೋಷಿಸಬೇಕು ಮತ್ತು ಪರಿಹಾರ ಕೊಡಬೇಕು ಎನ್ನುವ ರೈತರ ಹಕ್ಕೊತ್ತಾಯಗಳೊಂದಿಗೆ ಪ್ರತಿಭಟನೆ ನಡೆಸಿ ಎಐಕೆಕೆಎಂಎಸ್ ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು.
ಇದನ್ನು ಓದಿದ್ದೀರಾ? ಕುಂದಾಪುರ | ರಿವರ್ಸ್ ಬರುತ್ತಿದ್ದ ಇನ್ನೋವಾ ಕಾರಿಗೆ ಮೀನಿನ ಲಾರಿ ಡಿಕ್ಕಿ: ಚಾಲಕನ ಸಹಿತ 8 ಮಂದಿ ಗಂಭೀರ
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸತೀಶ್, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ನೀರ್ತಡಿ, ಭೀಮಣ್ಣ ಮಾಯಕೊಂಡ, ಮುಖಂಡರಾದ ಲೋಕೇಶ್, ಮಂಜುನಾಥ್ ರೆಡ್ಡಿ, ರಾಜು, ಬೀರಲಿಂಗಪ್ಪ ಹಾಗೂ ನೂರಾರು ರೈತರು ಮತ್ತು ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.
