ಖಾತೆ ವರ್ಗಾವಣೆಗೆ ಲಂಚ ಪಡೆದ ಆರೋಪದಡಿ ದಾವಣಗೆರೆ ಮಹಾನಗರ ಪಾಲಿಕೆ ಕಂದಾಯ ಇಲಾಖೆಯ ಕರ ವಸೂಲಿಗಾರ ಎನ್ ಶಿವಣ್ಣ ಎಂಬುವರನ್ನು ಅಮಾನತುಗೊಳಿಸಿ ಮಹಾನಗರ ಪಾಲಿಕೆಯ ಆಯುಕ್ತರೂ ಆದ ಶಿಸ್ತು ಪ್ರಾಧಿಕಾರಿ ರೇಣುಕಾ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಎನ್.ಶಿವಣ್ಣ ಅವರು ಲಂಚ ಸ್ವೀಕರಿಸುತ್ತಿರುವ ದೃಶ್ಯವಿರುವ ವಿಡಿಯೋವನ್ನು ಆಯುಕ್ತರ ವಾಟ್ಸ್ ಆ್ಯಪ್‌ಗೆ ಕಳುಹಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಜಿಲ್ಲಾಧಿಕಾರಿಯೂ ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಇದೀಗ ವಿಚಾರಣೆ ಬಾಕಿ ಇಟ್ಟು ಅಮಾನತುಗೊಳಿಸಿದ್ದಾರೆ.
“ವಿಡಿಯೋದಲ್ಲಿರುವ ದೃಶ್ಯವನ್ನು ಅವಲೋಕಿಸಿದಾಗ 500ರ ನೋಟು ಎಣಿಸಿ, ನಂತರ ತಮ್ಮ ಜೇಬಿಗೆ ಇಟ್ಟುಕೊಳ್ಳುತ್ತಿರುವುದು ಸ್ಪಷ್ಟವಾಗಿವುದರಿಂದ ಲಂಚ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ” ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
“ಕರ ವಸೂಲಿಗಾರರು ಜವಾಬ್ದಾರಿಯುತ ಖಾಯಂ ನೌಕರರಾಗಿದ್ದು, ಆನ್‌ಲೈನ್ ತಂತ್ರಾಂಶದ ಮೂಲಕ ಸೃಷ್ಟಿಸಿರುವ ಚಲನ್ ಪಡೆದು ಬ್ಯಾಂಕ್ ಮೂಲಕ ಖಾತಾ ವರ್ಗಾವಣೆ ಶುಲ್ಕ ಪಾವತಿಸುವುದು ಸರಿಯಾದ ನಿಯಮ. ಆದರೆ ನೀವು, ಸಾರ್ವಜನಿಕರಿಂದ ನೇರವಾಗಿ ಹಣ ಪಡೆದು ಖಾತಾ ವರ್ಗಾವಣೆ ಶುಲ್ಕ ಪಾವತಿಸುತ್ತೇನೆಂದು ಹೇಳುತ್ತಿರುವುದು ತಮ್ಮ ಸಮಜಾಯಿಷಿ ಉತ್ತರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಜೆಟ್‌ನಲ್ಲಿ ಬಿಸಿಯೂಟ ತಯಾರಕರ ವೇತನ 6,000 ರೂ. ಹೆಚ್ಚಳಕ್ಕೆ ಒತ್ತಾಯ
“ಖಾಯಂ ನೌಕರ ಆಗಿರುವ ಶಿವಣ್ಣ ಅವರು ಸಾರ್ವಜನಿಕರಿಂದ ಹಣವನ್ನು ನೇರವಾಗಿ ತೆಗೆದುಕೊಳ್ಳುತ್ತಿರುವುದು ಮತ್ತು ಹೆಚ್ಚಿನ ಹಣಕ್ಕೆ ಒತಾಯಿಸುತ್ತಿರುವುದು ವಾಟ್ಸಾಪ್ ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋವನ್ನು ಕಳುಹಿಸಿ ಕ್ರಮ ತೆಗೆದುಕೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದಾರೆ. ಅದರಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಮೇಲ್ನೋಟಕ್ಕೆ ಅವರ ಮೇಲಿನ ಆರೋಪ ಸಾಬೀತಾಗಿದೆ. ಅದರಿಂದ ಸರ್ಕಾರಿ ಭ್ರಷ್ಟಾಚಾರ ತಡೆ ಕಾಯ್ದೆಗಳ ಪ್ರಕಾರ ಅವರನ್ನು ಸದ್ಯ ಅಮಾನತು ಮಾಡಿದ್ದು, ವಿಚಾರಣೆ ಮುಂದುವರಿಸಲಾಗಿದೆ” ಎಂದು ಆಯುಕ್ತೆ ರೇಣುಕಾ ತಿಳಿಸಿದ್ದಾರೆ.