ಸಹಕಾರ ಬ್ಯಾಂಕಿಗೆ ವಂಚನೆ ಮಾಡಿರುವ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಇತರೆ ನಿರ್ದೇಶಕರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಮ್ ಆದಿ ಪಾರ್ಟಿ ದಾವಣಗೆರೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಎಪಿ ಮುಖಂಡರು, ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ದ್ವಿಚಕ್ರ ವಾಹನಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಡಳಿತದ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಎಎಪಿ ಜಿಲ್ಲಾ ಘಟಕದ ಪದಾಧಿಕಾರಿ ಮಾತನಾಡಿ, “ಬೆಳಗಾವಿಯ ಸೌಭಾಗ್ಯಲಕ್ಷ್ಮಿ ಶುಗರ್ಸ್ ಕಂಪನಿಯ ಮಾಲೀಕರು, ಗೋಕಾಕ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಇತರೆ ಇಬ್ಬರು ನಿರ್ದೇಶಕರು ಸೇರಿ ₹439 ಕೋಟಿ ಹಣವನ್ನು ಸಹಕಾರ ಬ್ಯಾಂಕಿನಿಂದ ಸಾಲ ಪಡೆದು ಹಿಂದಿರುಗಿಸದೆ ವಂಚನೆ ಮಾಡಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈವರೆಗೆ ಯಾವುದೇ ರೀತಿಯ ಬಂಧನವಾಗಲಿ, ತನಿಖೆ ಪ್ರಕ್ರಿಯೆ ಆಗಲಿ ಪ್ರಾರಂಭಗೊಂಡಿಲ್ಲ” ಎಂದು ಕಿಡಿಕಾರಿದರು.
“ಸರ್ಕಾರ ಕೂಡ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ, ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದೆ. ರಾಜ್ಯದಲ್ಲಿ ಯಾವುದೇ ಬ್ಯಾಂಕಿಗೆ ಒಬ್ಬ ಸಾಮಾನ್ಯ ರೈತ ಸಾಲ ಪಡೆಯಲು ಹೋದರೆ ಕನಿಷ್ಟ ಹತ್ತಾರು ದಾಖಲಾತಿಗಳನ್ನು ಬ್ಯಾಂಕ್ ಅಧಿಕಾರಿಗಳು ಕೇಳುತ್ತಾರೆ. ಎಲ್ಲ ದಾಖಲಾತಿ ಒದಗಿಸಿದರೂ ಕೂಡ ಬ್ಯಾಂಕಿನವರು ಸಾಲ ಕೊಡಲು ಮುಂದಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಾಸಕರು, ಇತರರು ನೂರಾರು ಕೋಟಿಗಳ ಸಾಲವನ್ನು ಪಡೆದು ಹಿಂದಿರುಗಿಸದೆ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು, ಸರ್ಕಾರ ಅವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಲವಗೊಪ್ಪ ಗ್ರಾಮದಲ್ಲಿ ಏಕಾಏಕಿ ಸರ್ವೆ; ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಪ್ರತಿಭಟನೆಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಆರ್ ಅರುಣ್ ಕುಮಾರ್, ಗಣೇಶ್ ದುರ್ಗದ, ಆದಿಲ್ ಖಾನ್, ಎಸ್ ರಮೇಶ್ ನಾಯ್ಕ, ಸುರೇಶ್ ಶಿಡ್ಲಪ್ಪ, ಚಂದ್ರು, ಬಸವಂತಪ್ಪ, ಗಂಗಪ್ಪ ಇತರರು ಇದ್ದರು.