ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರವು ರಾಜ್ಯದಲ್ಲಿ ವಾಕ್ಸಮರ, ಆರೋಪಗಳಿಗೆ ಕಾರಣವಾಗಿರುವ ಬೆನ್ನಲ್ಲೇ, ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಪ್ರಸ್ತಾಪಿಸದೇ, “ಪಂಚಮಸಾಲಿ ಸಮಾಜದ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು” ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀ ಪಂಚಮಸಾಲಿ ಸಮಾಜದ ನಾಯಕರ ಪರ ದನಿ ಎತ್ತಿದ್ದಾರೆ.
ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತೆರಳುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಬಿಜೆಪಿಯಲ್ಲಿ ಉನ್ನತ ಹುದ್ದೆಗಳನ್ನು ಪಂಚಮಸಾಲಿ ಸಮುದಾಯದ ನಾಯಕರಿಗೆ ನೀಡಬೇಕು. ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಒಳ್ಳೆಯದಾಗಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಎಪಿಎಂಸಿ ಮಾರುಕಟ್ಟೆ ಬಂದ್ ಕರೆ ವಾಪಸ್; ಮೆಕ್ಕೆಜೋಳ ವ್ಯಾಪಾರಕ್ಕೆ ಸೂಚನೆ
“ಬಿಜೆಪಿ ಅಧಿಕಾರದಲ್ಲಿದ್ದಾಗ ಪಂಚಮಸಾಲಿ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ಕೊಡಲಾಗಿತ್ತು. ಇದಕ್ಕೆ ಸಮುದಾಯವೂ ಕೂಡ ಕೃತಜ್ಞವಾಗಿದೆ. ಆದರೆ ಪಕ್ಷದ ಉನ್ನತ ಸ್ಥಾನಗಳನ್ನು ನಮ್ಮ ನಾಯಕರಿಗೆ ನೀಡಿಲ್ಲ. ಪಂಚಮಸಾಲಿ ಸಮಾಜವನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡು ನೋಡಲಾಗಿದ್ದು, ಇದು ಬೇಸರದ ಸಂಗತಿ” ಎಂದು ಹೇಳಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಬೆಂಬಲ ಸೂಚಿಸಿದರು.