ʼಭೀಮಾ ಕೋರೆಗಾಂವ್ ವಿಜಯೋತ್ಸವʼ ಐತಿಹಾಸಿಕ ಘಟನೆಯಾಗಿದ್ದು, 30 ಸಾವಿರದಷ್ಟು ಸೈನಿಕರಿದ್ದ ಪೇಶ್ವೆಗಳನ್ನು 500 ಮಂದಿಯಿದ್ದ ಮಹರ್ ಸೈನಿಕರು ಹೋರಾಟ ನಡೆಸಿ ಸೋಲಿಸಿದ ಮಹತ್ವದ ದಿನವೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಲ್ಲೇಶ್ ಅಭಿಮತ ವ್ಯಕ್ತಪಡಿಸಿದರು.
ದಾವಣಗೆರೆ ನಗರದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಭೀಮಾ ಕೋರೆಗಾಂವ್ ವಿಜಯೋತ್ಸವʼ ಆಚರಿಸಿ ಮಾತನಾಡಿದರು.
“ಬಾಬಾ ಸಾಹೇಬ್ ಅಂಬೇಡ್ಕರ್ ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಭೀಮಾ ಕೋರೆಗಾಂವ್ ವಿಜಯೋತ್ಸವ ಬಗ್ಗೆ ತಿಳಿದು ಸಂಶೋಧನೆ ನಡೆಸಿ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ದಿನದಂದು ಹಲವಾರು ಜನ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಮರಾಠ ಪೇಶ್ವೆಗಳನ್ನು ಸೋಲಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಮಹರ್ ಸೈನಿಕರ ಸಹಾಯ ಪಡೆದು ಪೇಶ್ವೆಗಳನ್ನು ಸೋಲಿಸಿ ಬ್ರಿಟಿಷ್ ಆಡಳಿತಕ್ಕೆ ಇದು ಮುನ್ನುಡಿ ಪಡೆಯಿತು. ದಲಿತರನ್ನು ಅವಮಾನಿಸಿದ್ದ ಪೇಶ್ವೆಗಳ ವಿರುದ್ಧ ದಲಿತರು ಆತ್ಮಗೌರವ, ಹಕ್ಕುಗಳಿಗಾಗಿ ಹೋರಾಡಿದ ಐತಿಹಾಸಿಕ ದಿನವೇ ಭೀಮಾ ಕೋರೆಗಾಂವ್ ವಿಜಯೋತ್ಸವ” ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಹಲವಾರು ದಲಿತ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಭಾಗವಹಿಸಿ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಆಚರಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಂಬೇಡ್ಕರ್ ವಿರುದ್ಧ ಸಾರ್ವಜನಿಕವಾಗಿ ಅವಹೇಳನ ಮಾಡಿರುವುದು ಖಂಡನೀಯ
ಈ ಸಂಭ್ರಮಾಚರಣೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಹೆಗ್ಗೆರೆ ರಂಗಪ್ಪ, ಅವರಗೆರೆ ಹೆಚ್ ಜಿ ಉಮೇಶ್, ಜಿಗಳಿ ಹಾಲೇಶ್, ಪುರದಾಳ್ ಪರಮೇಶ್, ಎಲ್ ಜಯಣ್ಣ, ಬಾತಿ ಸಿದ್ದೇಶ್, ಶಶಿಧರ್ ಶಿರಮಗೊಂಡನಹಳ್ಳಿ, ಮಲ್ಲೇಶ್ ಚಿಕ್ಕನಹಳ್ಳಿ, ಐರಣಿ ಚಂದ್ರು, ನಿಟ್ಟುವಳ್ಳಿ ಉಮೇಶ್, ನಿಂಗರಾಜ್ ಶಿರಮಗೊಂಡನಹಳ್ಳಿ, ನಾಗರಾಜ್ ಚಿಕ್ಕನಹಳ್ಳಿ, ರಾಮನಗರ ನಿಂಗಪ್ಪ, ತಿಪ್ಪೇರುದ್ರಪ್ಪ, ನಾಗೇಶ್, ಮೇಗಳಗೆರೆ ಮಂಜು, ಹೆಚ್ ಸಿ ಮಲ್ಲಪ್ಪ, ಬಿ ಹನುಮಂತಪ್ಪ ಹಾಗೂ ಕಾರ್ಯಕರ್ತರು ಇದ್ದರು.