ದಾವಣಗೆರೆ | ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ; ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ

Date:

Advertisements

ಗ್ರಾಮೀಣ ಜನರಿಗೆ ಶುದ್ಧವಾದ ನೀರು ಕೊಡುವ ಉದ್ದೇಶದಿಂದ ಸರ್ಕಾರ ನಿರ್ಮಿಸಿರುವ ಗ್ರಾಮೀಣ ಶುದ್ಧ ನೀರಿನ ಘಟಕಗಳು ಜಗಳೂರು ತಾಲೂಕಿನಾದ್ಯಂತ ಜನಪ್ರತಿನಿಧಿಗಳ, ಅಧಿಕಾರಿಗಳ  ನಿರ್ಲಕ್ಷ್ಯದಿಂದ ದುರಸ್ತಿಗೊಳ್ಳದೆ ನಿಷ್ಪ್ರಯೋಜಕವಾಗಿ ಧೂಳು ತಿನ್ನುತ್ತಿವೆ. ಮತ್ತೊಂದೆಡೆ ಶುದ್ಧ ಕುಡಿಯುವ ನೀರಿಗಾಗಿ ಜನರು ಹಪಹಪಿಸುತ್ತಿದ್ದಾರೆ. ಶುದ್ಧ ನೀರು ಸಿಗದೆ ಫ್ಲೋರೈಡ್‌ಯುಕ್ತ ಬೋರ್‌ವೆಲ್ ನೀರನ್ನೇ ಆಶ್ರಯಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಶುದ್ದಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಒಂದು ವರ್ಷವೂ ಚಾಲ್ತಿಯಲ್ಲಿ ಇಲ್ಲದೇ ಕೆಟ್ಟುನಿಂತಿವೆ. ಇದು ಕೇವಲ ಒಂದೆರಡು ಹಳ್ಳಿಗಳ ಪರಿಸ್ಥಿತಿ ಅಲ್ಲ. ಬಹುತೇಕ ಗ್ರಾಮಗಳಲ್ಲಿ ಈ ಸಮಸ್ಯೆ ತಲೆದೋರಿದೆ.

ಶುದ್ಧ ನೀರಿನ ಘಟಕ ಕೆಟ್ಟುನಿಂತಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಪಟ್ಟಣ ಪ್ರದೇಶದ ನಾಗರಿಕರಂತೆ ಗ್ರಾಮೀಣ ಭಾಗದ ಜನರೂ ಕೂಡಾ ಆರೋಗ್ಯದ ದೃಷ್ಟಿಯಿಂದ ಶುದ್ದ ಕುಡಿಯುವ ನೀರು ಕುಡಿಯಲೆಂದು ಸರ್ಕಾರ ನೂರಾರು ಕೋಟಿ ವೆಚ್ಚ ಮಾಡಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. ಆದರೆ ಶೇ.90ರಷ್ಟು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ದುರಸ್ತಿಗೊಂಡಿದ್ದು, ಅವುಗಳನ್ನು ಸರಿಪಡಿಸುವಂತಹ ಕೆಲಸ ಅವುಗಳ ನಿರ್ವಾಹಣೆ ಜವಾಬ್ದಾರಿ ಹೊತ್ತ ಇಲಾಖೆಯಾಗಲಿ ಅಥವಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಾಗಲಿ, ಸ್ಥಳೀಯ ಮಟ್ಟದ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಗಮನ ಕೊಡದೇ ಇರುವುದು ಹಳ್ಳಿ ಜನರ ದೌರ್ಭಾಗ್ಯವೇ ಸರಿ.

Advertisements

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳುಗಳೇ ಕಳೆದರೂ ಈವರೆಗೂ ಇದನ್ನು ಯಾರೂ ದುರಸ್ತಿಗೊಳಿಸಿಲ್ಲ. ಗ್ರಾಮ ಪಂಚಾಯಿತಿ ಕೇಂದ್ರದ ಗುರು ಸಿದ್ದಾಪುರ ಗ್ರಾಮದ ಕುಡಿಯುವ ನೀರಿನ ಘಟಕ ಕೂಡ ಕೆಟ್ಟು ನಿಂತಿದ್ದು, ಗ್ರಾಮಗಳಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದ್ದು, ಜನರು ಲವಣಾಂಶ ತುಂಬಿರುವ ನೀರು ಕುಡಿದು ಹಲವು ಖಾಯಿಲೆಗಳಿಗೆ ಗುರಿಯಾಗಿದ್ದಾರೆ.  ಇಲ್ಲಿನ ಜನ  ಒಂದಲ್ಲ ಒಂದು ಅನಾರೋಗ್ಯಕ್ಕೆ ಸಿಲುಕಿ ಪರದಾಡುತ್ತಿದ್ದಾರೆ. ನಿತ್ಯವೂ ಹತ್ತಿರದ ತಾಲೂಕು ಕೇಂದ್ರ ಜಗಳೂರಿನ ಆಸ್ಪತ್ರೆಗಳಿಗೆ, ದಾವಣಗೆರೆ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ.

“ಯಂತ್ರಗಳು ಕೆಟ್ಟಿರುವ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಲೋಕಸಭಾ ಚುನಾವಣೆಯ ಮತ ಪ್ರಚಾರಕ್ಕೆ ಬಂದಾಗ ಶಾಸಕರ ಗಮನಕ್ಕೂ ತಂದಿದ್ದೇವೆ. ಆದರೂ ಕೂಡಾ ಈವರೆಗೂ ದುರಸ್ತಿಯಾಗಿಲ್ಲ. ಕೇವಲ ಮತಯಾಚನೆಗೆ ಗ್ರಾಮಕ್ಕೆ ಬರುತ್ತಾರೆ. ಜನರ ಅಹವಾಲುಗಳನ್ನು ಜನಪ್ರತಿನಿಧಿಗಳು ಆಲಿಸಬೇಕು. ಶೀಘ್ರವೇ ಶುದ್ದ ನೀರಿನ ವ್ಯವಸ್ಥೆ ಮಾಡಿಕೊಡಬೇಕು” ಎಂದು ತಾಲೂಕಿನ ದಸಂಸ ಮುಖಂಡ ಸತೀಶ್ ಹಾಗೂ ಗ್ರಾಮಸ್ಥ ಅಂಜಿನಪ್ಪ ಒತ್ತಾಯಿಸಿದರು.

“ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಅಧಿಕಾರಿ ಸಾಧೀಖ್ ಉಲ್ಲಾ ಖಾನ್ ಕಚೇರಿಯಲ್ಲಿ ಸಿಗುವುದೇ ಕಷ್ಟ, ಬಂದರೂ ಕಚೇರಿ ಬಿಟ್ಟು ಗ್ರಾಮಗಳತ್ತ ತಿರುಗಿ ನೋಡುವುದಿಲ್ಲ, ಕೇವಲ ಇಲಾಖೆ ಕಡತ- ಬಿಲ್‌ಗಳಿಗೆ ಸಹಿ ಮಾಡಲು ಹಣ ಡ್ರಾ ಮಾಡುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಈ ಮೊದಲು ಬರಗಾಲದಿಂದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದರೂ ತನಗೇನು ಸಂಬಂಧವೇ ಇಲ್ಲದಂತೆ ಇದ್ದರು. ಪಿಡಿಒಗಳೂ ಕೂಡ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಇಂತಹ ಅಧಿಕಾರಿಗಳಿಂದ ತಾಲೂಕು ಆಡಳಿತಕ್ಕೆ ಕೆಟ್ಟ ಹೆಸರು. ಇವರಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಲೂ ಸಾಧ್ಯವಿಲ್ಲ. ಶಾಸಕರು ಇಂತಹ ಅಧಿಕಾರಿಗಳ ಮೇಲೆ ಕಣ್ಣಿಟ್ಟು ಕೆಲಸ ಮಾಡಿಸಬೇಕು. ಇಲ್ಲದಿದ್ದರೆ ಬೇರೆ ಕಡೆ ಎತ್ತಂಗಡಿ ಮಾಡಬೇಕು” ಎನ್ನುತ್ತಿದ್ದಾರೆ ಸಾರ್ವಜನಿಕರು.

ಈ ಬಗ್ಗೆ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ ಗುರು ಸಿದ್ದಾಪುರ ಪಂಚಾಯಿತಿಯ ಪಿಡಿಒ ವಾಸು, “ಸಮಸ್ಯೆ ಪರಿಹಾರಕ್ಕೆ ನಾವು ಪ್ರಯತ್ನಿಸುತ್ತಿದ್ದು, ಈವರೆಗೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಅಡ್ಡಿಯಾಗಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ದುರಸ್ತಿ ಮಾಡಲು ಕ್ರಮ ಕೈಗೊಂಡಿದ್ದು, ಅನುಮೋದನೆ ಪಡೆದು ಶೀಘ್ರವಾಗಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸುತ್ತೇವೆ” ಎಂದು ಉತ್ತರಿಸಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಈ ದಿ.ಕಾಮ್‌ಗೆ ಪ್ರತಿಕ್ರಿಯಿಸಿದ್ದು, “ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮ ಪಂಚಾಯಿತಿಯವರಿಗೆ ಹಸ್ತಾಂತರ ಮಾಡಿದ್ದು, ಅವರೇ ನಿರ್ವಹಣೆ ಮಾಡಬೇಕು. ಆದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

“ಶೀಘ್ರದಲ್ಲೇ ಕ್ರಮ ಕೈಗೊಂಡು ಗ್ರಾಮಗಳ ಜನರು ಫ್ಲೋರೈಡ್‌ಯುಕ್ತ ನೀರು ಕುಡಿಯುವುದನ್ನು ತಪ್ಪಿಸಿ ಸ್ಥಳೀಯರ ಆರೋಗ್ಯ ಕಾಪಾಡಬೇಕು” ಎಂದು ಗ್ರಾಮಸ್ಥರು, ಸಾರ್ವಜನಿಕರು ಆಗ್ರಹಿಸಿದರು.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X