ತಾಯಿ ಮಗಳ ಸ್ಪರ್ಧೆ ಎಂಬ ಭಾವನಾತ್ಮಕ ದಾಳ ಉರುಳಿಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ತಿರುಗೇಟು ನೀಡಿದ್ದಾರೆ. “ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಮಗಳ ಸಂಬಂಧಕ್ಕೆ ಬೆಲೆ ಇದೆ, ಗೌರವ ಇದೆ. ಆದರೆ ಚುನಾವಣೆಯೆಂದ ಮೇಲೆ ಗೆಲುವಿಗೆ ಹೋರಾಟ ಮಾಡುವುದಷ್ಟೇ ಮುಖ್ಯ” ಎಂದು ಹೇಳಿದ್ದಾರೆ.
ದಾವಣಗೆರೆಯ ಎಂಸಿಸಿಬಿ ಬ್ಲಾಕ್‌ನಲ್ಲಿನ ನಿವಾಸದ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಬೇಕೆಂಬುದನ್ನು ಪ್ರಜ್ಞಾವಂತ ಮತದಾರರು ನಿರ್ಧರಿಸುತ್ತಾರೆ. ಚುನಾವಣೆಯಲ್ಲಿ ಸಂಬಂಧಕ್ಕಿಂತ ಜನರ ಸೇವೆ ಮುಖ್ಯ. ಕಷ್ಟ, ಸುಖದಲ್ಲಿ ಭಾಗಿಯಾಗುವುದು ತುಂಬಾನೇ ಪ್ರಮುಖವಾಗುತ್ತದೆ. ಪ್ರತಿಯೊಬ್ಬರನ್ನೂ ಭೇಟಿ ಮಾಡಲು ಆಗದು. ಕೇವಲ 40 ದಿನಗಳು ಮಾತ್ರ ಇದ್ದು, ಎಲ್ಲ ಶಾಸಕರು, ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮಿಸುವುದಾಗಿ ವಿಶ್ವಾಸವಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ʼಜನರು ಒಂದೇ ಕುಟುಂಬದ ಮೂವರಿಗೆ ಅಧಿಕಾರ ನೀಡುವುದಿಲ್ಲʼವೆಂಬ ವ್ಯಂಗ್ಯದ ಮಾತಿಗೆ ಪ್ರತಿಕ್ರಿಯೆ ನೀಡಿದ ಪ್ರಭಾ ಮಲ್ಲಿಕಾರ್ಜುನ್, “ನಾನಾಗಿ ಯಾವತ್ತೂ ಟಿಕೆಟ್ ಕೇಳಿಲ್ಲ. ಯಾರು ನಿಂತರೆ ಗೆಲುವು ಸಾಧ್ಯವೆಂಬ ಲೆಕ್ಕಾಚಾರ ಹಾಕಿ ಟಿಕೆಟ್ ಘೋಷಿಸಲಾಗಿದೆ. ಹರಪನಹಳ್ಳಿಯೂ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಎಲ್ಲರೂ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ನಮ್ಮದು ಯಾವುದೇ ಅಸ್ತ್ರ ಇಲ್ಲ, ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ. ಬಿಜೆಪಿಯವರದ್ದು ಮೋದಿ ಅಲೆ ಇದ್ದರೆ, ನಮ್ಮದು ಮಾತ್ರ ಕಾಂಗ್ರೆಸ್ ಅಲೆ. ಜನರು ಅಭಿವೃದ್ಧಿ ಕೆಲಸಗಳನ್ನು ನೋಡಿಕೊಂಡು ನಮಗೆ ಮತ ನೀಡುತ್ತಾರೆ” ಎಂದು ಪ್ರತ್ಯುತ್ತರ ನೀಡಿದರು.
ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಿ ದರ್ಶನ ಪಡೆದ ಬಳಿಕ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿ, “ಇತಿಹಾಸದಲ್ಲಿ ಮೊದಲ ಬಾರಿಗೆ ದಾವಣಗೆರೆಯಲ್ಲಿ ಮಹಿಳೆಯರಿಗೆ ಗೆಲುವಿನ ಅವಕಾಶ ಸಿಕ್ಕಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಕ್ಕಿರುವುದು ಖುಷಿ ತಂದಿದೆ” ಎಂದರು.
ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಎಂಬ ಪತ್ರಕರ್ತರ ಪ್ರಶ್ನೆಗೆ ಗಾಯತ್ರಿ ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿದ್ದು, “ಹೌದು ಶಾಮನೂರು ಕುಟುಂಬಕ್ಕೆ ಬೀಗರು ಆಗುತ್ತೇವೆ. ನಾನು ತಾಯಿ ಸ್ಥಾನದಲ್ಲಿದ್ದೇನೆ, ಅವರು ಮಗಳು” ಎಂದು ಗಾಯತ್ರಿ ಸಿದ್ದೇಶ್ವರ್ ಭಾವನಾತ್ಮಕ ದಾಳ ಉರುಳಿಸಿದ್ದರು.