ಸಂಸತ್ತಿನಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರ ವಿರುದ್ಧ “ಸಂವಿಧಾನ ಸಂರಕ್ಷಣಾ ವೇದಿಕೆ” ವತಿಯಿಂದ ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಲಾಯಿತು.
ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ನಂತರ ಜಯದೇವ ವ್ರತ್ತ, ಗಾಂಧಿ ಸರ್ಕಲ್ , ನಗರ ಸಭೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಮತ್ತೆ ಅಂಬೇಡ್ಕರ್ ವೃತ್ತಕ್ಕೆ ಬಂದು ಬಹಿರಂಗ ಸಭೆ ನಡೆಸಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ವೇದಿಕೆಯ ಸಂಚಾಲಕರಾದ ಅನಿಸ್ ಪಾಷರವರು ಮಾತನಾಡಿ “ಸಂಸತ್ತಿನಲ್ಲಿ ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಹೇಳಿಕೆ ಅತ್ಯಂತ ಖಂಡನಾರ್ಹ, ಅಂಬೇಡ್ಕರ್ ಬಗ್ಗೆ ಈ ಹೇಳಿಕೆ ಕೊಟ್ಟ ಅವರದ್ದು ಅತ್ಯಂತ ನೀಚ ಮನಸ್ಥಿತಿ. ಅವರಿಗೆ ಅಂಬೇಡ್ಕರ್ ಬಗ್ಗೆ ಅರಿವು ಪ್ರಜ್ಞೆ ಇಲ್ಲದಿರುವುದರಿಂದ ಇಂಥಹ ಮಾತು ಬಂದಿದೆ. ಅಂಬೇಡ್ಕರ್ ಅವರ ಜ್ಞಾನ, ಅರಿವು,ಶ್ರಮ, ಸಂವಿಧಾನ ರಚಿಸಲು ಅವರ ಬದ್ದತೆ ತಿಳಿದುಕೊಂಡರೆ ಅಂಬೇಡ್ಕರ್ ಅವರ ಮಹತ್ವ ತಿಳಿಯುತ್ತದೆ. ಅವರ ಈ ಹೇಳಿಕೆ ಖಂಡಿಸಲು, ಮುಂದಿನ ದಿನಗಳಲ್ಲಿ ಸಂವಿಧಾನ ರಕ್ಷಣೆ ಸಲುವಾಗಿ ಈ ಸಂವಿಧಾನ ರಕ್ಷಣಾ ವೇದಿಕೆ ರಚಿಸಲಾಗಿದೆ. ಕೂಡಲೇ ಅಮಿತ್ ಶಾ ಕ್ಷಮೆ ಕೇಳಬೇಕು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಂವಿಧಾನ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ” ಎಂದು ಹೇಳಿದರು.
ಪ್ರೊ.ಎಬಿ ರಾಮಚಂದ್ರಪ್ಪ ಮಾತನಾಡಿ “ಸಂಸತ್ತಿನ ಚಳಿಗಾಲದ ಅದಿವೇಶನದಲ್ಲಿ ಚರ್ಚೆ ಸಂದರ್ಭದಲ್ಲಿ ಮಾನ್ಯ ಗೃಹ ಮಂತ್ರಿಗಳಾದ ಅಮಿತ್‌ಶಾ ರವರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಕೇವಲವಾಗಿ ಮಾತನಾಡಿರುವುದು ಇಡೀ ದೇಶದ ಜನತೆಗೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿಗಳಿಗೆ ಗಳಿಗೆ ತುಂಬಾ ನೋವುಂಟು ಮಾಡಿದೆ. ಇದು ಅಮಿತ್‌ಶಾ ರವರಿಗೆ ಅಂಬೇಡ್ಕರ್‌ರವರ ಮೇಲೆ ಇಟ್ಟಿರುವ ದ್ವೇಷ ಭಾವನೆ ಅಷ್ಟೇ ಅಲ್ಲ, ಸಂಘಪರಿವಾರದ ಅಜೆಂಡಾ ಕೂಡ ಎದ್ದು ಕಾಣುತ್ತದೆ. ಇಂತಹ ಗೃಹ ಮಂತ್ರಿಗಳನ್ನು ಕೂಡಲೇ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.

ವಕೀಲ ಬಿ ಎಂ ಹನುಮಂತಪ್ಪ ಮಾತನಾಡಿ “ಈ ಬಾರಿ 400 ಕ್ಕಿಂತ ಅಧಿಕ ಸಂಸದರು ಗೆದ್ದು ಬಂದಲ್ಲಿ ಸಂವಿಧಾನವನ್ನು ಬದಲಾಯಿಸುತ್ತೇವೆ. ಹೊಸ ಸಂಸತ್ ಭವನದಲ್ಲಿ ಹೊಸ ಸಂವಿಧಾನವನ್ನು ಅಳವಡಿಸಲಾಗುವುದು ಎಂದು ಹೇಳುತ್ತಾ ಮನುಸ್ಮೃತಿಯನ್ನೇ ಸಂವಿಧಾನವನ್ನಾಗಿ ಮಾಡುವ ತವಕದಲ್ಲಿದ್ದ ವ್ಯಕ್ತಿಗಳು ಈ ರೀತಿಯ ದ್ವೇಷ ಭಾವನೆಯನ್ನು ಪದೇ-ಪದೇ ಹೊರಹಾಕುತ್ತಿದ್ದಾರೆ. ಅಮಿಷಾ ಗೃಹ ಮಂತ್ರಿಯಾಗಿರುವುದು ಸಂಸದ ಆಗಿರುವುದು ಕೂಡ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಎಂಬುದನ್ನು ಅರ್ಥ ಮಾಡಿಕೊಂಡು ಈ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಜಬೀನ ಖಾನಂ ಮಾತನಾಡಿ, “ಈ ದೇಶದ ಶೋಷಿತ ದಲಿತ ಸಮುದಾಯಗಳ ಏಳಿಗೆಗಾಗಿ, ಸಮಾನತೆಗಾಗಿ ಅಂಬೇಡ್ಕರ್ ಅವರು ಕೆಲಸ ಮಾಡಿದ್ದಾರೆ. ಸಂವಿಧಾನ ರಚಿಸಿ ಸಂವಿಧಾನದ ಮೂಲಕ ದಲಿತರಿಗೆ, ಹಿಂದುಳಿದವರಿಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ಸಮಾನತೆಯನ್ನು ಹಕ್ಕನ್ನು ಕಲ್ಪಿಸಿದವರು ಅಂಬೇಡ್ಕರ್ ರವರು. ಅಂತ ಮಹಾತ್ಮರ ಬಗ್ಗೆ ಕೇವಲವಾಗಿ ಮಾತನಾಡಿರುವುದು ಅಮಿತ್ ಶಾ ರವರ ಜ್ಞಾನದ ಕೊರತೆಯನ್ನು ತೋರಿಸುತ್ತದೆ. ಈ ಕೂಡಲೇ ಅಮಿತ್ ಶಾ ರವರು ಸಂಸದ ಮತ್ತು ಗೃಹಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಭಾರತ ದೇಶದ ಹೆಚ್ಚಿನ ಶೋಷಿತ ಸಮುದಾಯಗಳು ಬಾಬಾ ಸಾಹೇಬ್ ಅಂಬೇಡ್ಕರ್‌ರವನ್ನು ದೇವರ ರೀತಿಯಲ್ಲಿ ಪೂಜಿಸುವುದುಂಟು, ಈ ರೀತಿ ಅವಹೇಳನ ಮಾಡುವುದನ್ನು ಪೂಜ್ಯ ಭಾವನೆಗಳನ್ನು ಹೊಂದಿದ ಶೋಷಿತ ಸಮುದಾಯಗಳು ಎಂದೆಂದಿಗೂ ಸಹಿಸುವುದಿಲ್ಲ. ಹಾಗಾಗಿ ಕೇಂದ್ರದ ಗೃಹ ಮಂತ್ರಿಗಳಾದ ಅಮಿತ್ ಶಾ ರವರನ್ನು ಈ ಕೂಡಲೇ ಸಚಿವ ಸಂಪುಟದಿಂದ ಪದಚ್ಯುತಿಗೊಳಿಸಬೇಕೆಂದು ಸಂವಿಧಾನ ಸಂರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಎಂದು ವೇದಿಕೆಯ ಮುಖಂಡರು ಕಿಡಿಕಾರಿದರು.
ಪ್ರತಿಭಟನಾ ಸಭೆಯಲ್ಲಿ ಹೆಗ್ಗೆರೆ ರಂಗಪ್ಪ ಕ್ರಾಂತಿ ಗೀತೆಗಳನ್ನು ಹಾಡಿದರು, ಸಂಚಾಲಕರುಗಳಾದ ವಕೀಲರಾದ ಬಿಎಮ್ ಹನುಮಂತಪ್ಪ, ರವಿ ನಾರಾಯಣ , ರುದ್ರಮನಿ ನಿವ್ರತ್ತ ಪೋಲಿಸ್ ಅಧಿಕಾರಿಗಳು, ಎ.ಬಿ. ರಾಮಚಂದ್ರಪ್ಪ, ಬಿ ವೀರಣ್ಣ, ಮುಸ್ಲಿಂ ಸಮಾಜದ ಅಧ್ಯಕ್ಷರಾದ ದಾದು ಸೆಟ್ ಇಮ್ರಾನ್ , ಸಾಬಿರಲಿ, ಗುಮನೂರು ಮಲ್ಲಿಕಾರ್ಜುನ್, ಆನಂದ್ ಗುರೂಜಿ , ಭೈರೇಷ್, ಅಬ್ದುಲ್ಲ ನಜೀರ್, ಸತೀಶ ಅರವಿಂದ, ಕರಿಬಸಪ್ಪ, ಗನಿ ತಾಹಿರ್, ಸ್ಲಂ ಜನಂದೋಲನ ಸಂಘಟನೆಯ ರೇಣುಕಾ ಎಲ್ಲಮ್ಮ ವಿಜಯಮ್ಮ ಶಬ್ಬೀರ್ ಸಾಬ್ , ಭಾಗ್ಯ, ಎಡಿ ಈಶ್ವರಪ್ಪ, ಹನುಮಂತಪ್ಪ, ಮೈಲಾರಪ್ಪ ,ಬಸವರಾಜ್, ಶೇಖರಪ್ಪ, ಪರಮೇಶ್ವರಪ್ಪ, ಭಾಷಾ ಸಾಬ್, ಆಯುಬ್ ಸಾಬ್, ಹಲಸಂಗಿ, ಜಗನ್ನಾಥ್ ಇನ್ನಿತರರು ಭಾಗವಹಿಸಿದ್ದರು.
