ಹಲವು ಪ್ರಕರಣಗಳಲ್ಲಿ ರೈತರು ಮತ್ತು ದಲ್ಲಾಳಿಗಳಿಂದ ಮೆಕ್ಕೆಜೋಳ, ಭತ್ತ ಖರೀದಿ ಮಾಡಿ ರೈತರಿಗೆ ಹಣ ನೀಡದೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪಿ ಶ್ರೀನಿವಾಸ್ ಅಲಿಯಾಸ್ ಶಿವಣ್ಣ(46) ಎಂಬಾತನನ್ನು ದಾವಣಗೆರೆಯ ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ, ಕಂಪಮಲ್ಲ ಗ್ರಾಮದ ದಲ್ಲಾಳಿ ಕೆಲಸ ಮಾಡುವ ಎಂ. ನರಸಯ್ಯ ತಮ್ಮ ಜಿಲ್ಲೆಯ ಸುತ್ತಮುತ್ತ ಇರುವ ರೈತರಿಂದ ಖರೀದಿದಾರರಿಗೆ ಭತ್ತವನ್ನು ಕೊಡಿಸುವ ಕೆಲಸವನ್ನು ಮಾಡುತ್ತಿದ್ದರು.
ದಿನಾಂಕ:07.10.2023 ರಂದು ರಾತ್ರಿ 10 ಗಂಟೆಗೆ ದಾವಣಗೆರೆಯ ಶ್ರೀನಿವಾಸ ಎನ್ನುವ ವ್ಯಕ್ತಿ ದೂರವಾಣಿ ಕರೆಮಾಡಿ ನಾನು ನಿಮ್ಮ ಲಾರಿಯ ಡ್ರೈವರ್ ಕಡೆಯಿಂದ ನಿಮ್ಮ ನಂಬರ್ ಪಡೆದುಕೊಂಡಿದ್ದೇನೆ, ನನ್ನ ಭತ್ತದ ಮಿಲ್ ಇದೆ. ನೀವು ನನಗೆ ಭತ್ತವನ್ನು ಕಳುಹಿಸಿದರೆ ನಾನು ಬೇರೆಯವರಿಗಿಂತ 50 ರೂ ಹೆಚ್ಚಿಗೆ ಕೊಡುತ್ತೇನೆ. ಭತ್ತ ಮಾರಾಟಕ್ಕೆ ನನ್ನ ಜಿ ಎಸ್ ಟಿ ಇದೆ ನಿಮಗೆ ಬೇಕಾದರೆ ಕೊಡುತ್ತೇನೆ ಎಂದು ನಂಬಿಸಿದ್ದಾರೆ.
ಇದನ್ನು ನಂಬಿದ ದೂರುದಾರ ನರಸಯ್ಯ ದಿ: 28-04-2023 ರಿಂದ 21-05-2023 ರ ಅವಧಿಯಲ್ಲಿ 40 ಲೋಡ್ ಭತ್ತವನ್ನು ಕಳುಹಿಸಿದ್ದಾರೆ. ಅದರ ಒಟ್ಟು ಮೊತ್ತ 2,58,65,200/- ಆಗಿದೆ. ಅದರಲ್ಲಿ ಮೊದಲು ಕಳುಹಿಸಿರುವ 15 ಲೋಡ್ ಭತ್ತದ ಹಣಕ್ಕೆ, ಮೊತ್ತ ರೂ. 75,00,000 /- ಹಣವನ್ನು ಆರೋಪಿತ ಶ್ರೀನಿವಾಸ ಕಳುಹಿಸಿ ನಂಬಿಕೆಯನ್ನು ಹುಟ್ಟಿಸಿದ್ದಾನೆ. ಅದೇ ನಂಬಿಕೆಯಿಂದ ಉಳಿದ 25 ಲೋಡ್ ಭತ್ತವನ್ನು ನೆರೆಹೊರೆಯ ರೈತರಿಂದ ಪಡೆದು ಶ್ರೀನಿವಾಸರವರಿಗೆ ಕಳುಹಿಸಿಕೊಟ್ಟಿದ್ದಾರೆ.
#ದಾವಣಗೆರೆ_ಜಿಲ್ಲಾ_ಪೊಲೀಸ್
— Davanagere District Police (@SpDavanagere) November 16, 2024
ಸಿಇಎನ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ರೈತರಿಂದ & ದಲ್ಲಾಳಿಗಳಿಂದ ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಮಾಡಿ ರೈತರಿಗೆ ಹಣ ನೀಡದೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಪ್ರಕರಣಗಳಲ್ಲಿನ ಆರೋಪಿತ ಶ್ರೀನಿವಾಸ ಬಂಧನ#spdavanagere #CENPS #davanagere #Accusedarrest@DgpKarnataka pic.twitter.com/OpHRacVYMu
ನಂತರ 25 ಲೋಡ್ ಬತ್ತದ ಬಾಕಿ ಉಳಿದಿರುವ ರೂ. 1,83,65,200/- ರೂ ಹಣವನ್ನು ಕೊಡದೆ ಸಬೂಬು ಹೇಳುತ್ತಾ , ಫೋನ್ ರಿಸೀವ್ ಮಾಡದೇ ಇದ್ದುದರಿಂದ ದಾವಣಗೆರೆಗೆ ಹುಡುಕಿಕೊಂಡು ಬಂದಿದ್ದು, ಅವರ ವಿಳಾಸ ಇತರೆ ಮಾಹಿತಿ ದೊರೆತಿಲ್ಲ.
ಶ್ರೀನಿವಾಸ ಮೊದಲು ನೀಡಿದ ಭತ್ತಕ್ಕೆ ಹಣವನ್ನು ನನಗೆ ಸರಿಯಾಗಿ ನೀಡಿ, ನಂಬಿಕೆ ಹುಟ್ಟಿಸಿ ಮೋಸ ಮಾಡುವ ಉದ್ದೇಶದಿಂದಲೇ ಉಳಿದ 25 ಲೋಡ್ ಭತ್ತವನ್ನು ತರಿಸಿಕೊಂಡು ರೂ. 1,83,65,200/- ರೂ ಹಣವನ್ನು ನೀಡದೇ ಮೋಸ ಮಾಡಿರುವ ಶ್ರೀನಿವಾಸ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆರ್.ಎಂ.ಸಿ. ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಗಾಗಿ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದರು.
ಪ್ರಕರಣದ ಆರೋಪಿತನ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಸಂತೋಷ್, ಮಂಜುನಾಥ ಜಿ, ಸಿಇಎನ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀಗುಂಜೀಕರ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರೂಪಾ ತೆಂಬದ್, ಸಿಬ್ಬಂದಿಗಳಾದ ಸೋಮಶೇಖರಪ್ಪ, ಲೋಹಿತ್, ಮಲ್ಲಿಕಾರ್ಜುನ ಹಾದಿಮನಿ, ಗೋವಿಂದರಾಜ್, ಸಣ್ಣ ಬುಡೇನ್ ವಲಿ ತಂಡವು ನ.13 ರಂದು ಆರೋಪಿ ಶ್ರೀನಿವಾಸನನ್ನು ಮಹಾಲಕ್ಷ್ಮಿ ಲೇಔಟ್ ದಾವಣಗೆರೆ ಇಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನು ಓದಿದ್ದೀರಾ? ಬಳ್ಳಾರಿ | ಜಿಲ್ಲಾಸ್ಪತ್ರೆಯಲ್ಲಿ ಮೂರೇ ದಿನದಲ್ಲಿ ಮೂವರು ಬಾಣಂತಿಯರ ಸಾವು
ಆರೋಪಿ ಶ್ರೀ ನಿವಾಸ ವಿರುದ್ಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಹದಡಿ, ಆರ್.ಎಂ.ಸಿ. ಪೊಲೀಸ್ ಠಾಣೆ, ಬಸವನಗರ ಪೊಲೀಸ್ ಠಾಣೆ, ಆಂದ್ರಪ್ರದೇಶ ರಾಜ್ಯದ ತಿರುಪತಿ ಜಿಲ್ಲೆಯ ಸತ್ಯವೇಡು ಪೊಲೀಸ್ ಠಾಣೆ ಪ್ರಕರಣಗಳಿವೆ. ಆರೋಪಿ ಮೇಲೆ ರಾಜ್ಯದಲ್ಲಿನ ರೈತರಲ್ಲಿ ಭತ್ತವನ್ನು ಪಡೆದು ಹಣವನ್ನು ವಾಪಸ್ ಕೊಡದೆ ಹಲವು ದೂರುಗಳು ದಾಖಲಾಗಿದ್ದು,
ಈ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.
ಹಲವಾರು ರೈತರಿಗೆ ಹಾಗೂ ದಲ್ಲಾಳಿಗೆ ವರ್ತಕರಿಗೆ ವಂಚನೆ ಮಾಡಿದ್ದ ಆರೋಪಿತ ಶ್ರೀನಿವಾಸನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಸಿಇಎನ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್
ಶ್ಲಾಘಿಸಿ, ಪ್ರಶಂಸನಾ ಪತ್ರಗಳನ್ನು ನೀಡಿದ್ದಾರೆ.
