2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಡವರಿಗಾಗಿ ಆರಂಭಿಸಿದ ಇಂದಿರಾ ಕ್ಯಾಂಟೀನ್ ಯೋಜನೆ ಬಡವರ ಹಸಿವು ನೀಗಿಸುವ ತಾಣವಾಗಿದೆ. ಇಲ್ಲಿ ತನಕ ಕ್ಯಾಂಟಿನ್ ಮೆನ್ಯೂನಲ್ಲಿ ಅನ್ನ ಸಾಂಬಾರ್, ಚಪಾತಿ, ತಿಂಡಿ ಕೇವಲ 10 ರೂಪಾಯಿಗೆ ಕೊಡಲಾಗುತ್ತಿತ್ತು. ಇದೀಗ ಸರ್ಕಾರ ಊಟದ ಮೆನ್ಯೂನಲ್ಲಿ ಮೊಟ್ಟೆ ಕೊಡಲು ನಿರ್ಧರಿಸಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಸುಳಿವು ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್‌ಗಳಲ್ಲಿ ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೂಲಿ ಕಾರ್ಮಿಕರು, ಬಡಜನರಿಗೆ ಪ್ರೋಟಿನ್ ನೀಡುವ ಉದ್ದೇಶದಿಂದ ನಮ್ಮ ಮೊಟ್ಟೆ ಕೊಡಬೇಕೆಂದು ನಿರ್ಧರಿಸಿದ್ದೇವೆ” ಎಂದರು.
“ಇಂದಿರಾ ಕ್ಯಾಂಟೀನ್ ಯೋಜನೆ ಸಿದ್ದರಾಮಯ್ಯ ಅವರ ಕನಸಿನ ಯೋಜನೆ. ಅವರು 2013ರಲ್ಲಿ ಸಿಎಂ ಆಗಿದ್ದಾಗ 196 ಕ್ಯಾಂಟೀನ್‌ಗಳನ್ನು ತೆರೆದರು. ನಮ್ಮ ಸರ್ಕಾರ ಇರುವ ತನಕ ಈ ಇಂದಿರಾ ಕ್ಯಾಂಟೀನ್‌ಗಳು ಚೆನ್ನಾಗಿ ನಡೆದವು. ತದನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಮಸ್ಯೆಗೆ ಸಿಲುಕಿದವು. ಪುನಃ ಸಿಎಂ ಆಗಿ ಸಿದ್ದರಾಮಯ್ಯ ಅವರು ನೇಮಕವಾದ ಬಳಿಕ, ಮುಚ್ಚಿದ್ದ ಕ್ಯಾಂಟೀನ್‌ಗಳನ್ನು ತೆರೆಸಿದರು. ಇದೀಗ ಮತ್ತೆ 186 ನೂತನ ಇಂದಿರಾ ಕ್ಯಾಂಟೀನ್ಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 100ಕ್ಕೂ ಅಧಿಕ ಕ್ಯಾಂಟೀನ್ ಪ್ರಾರಂಭವಾಗಿವೆ. ಉಳಿದ ಕ್ಯಾಂಟೀನ್‌ಗಳು ಶೀಘ್ರದಲ್ಲೇ ಕಾರ್ಯಾರಂಭ ಆಗಲಿವೆ. ಇದರಿಂದ ಜನರಿಗೆ ಅನುಕೂಲವಾಗಲಿದೆ” ಎಂದು ರಹೀಂ ಖಾನ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಎಲ್ಲ ವಂಚಿತ ಶ್ರಮಿಕ ನಿವಾಸಿಗಳಿಗೂ ಹಕ್ಕುಪತ್ರ ವಿತರಿಸಲು ತೀರ್ಮಾನ
“ಕೇಂದ್ರ ಸರ್ಕಾರ ವಿವಾದಿತ ಬಿಲ್(ಮಸೂದೆ)ಗಳನ್ನು ತರುವ ಬದಲು ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಬಿಲ್ ತರಲಿ. ಅಲ್ಲದೆ ಸಿಗರೇಟ್, ಕುಡಿತ, ಗುಟ್ಕಾ ಚಟದಿಂದ ಜನತೆ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿವಾಹಿತ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಿಗರೇಟ್, ಕುಡಿತ, ಗುಟ್ಕಾ ವಿರುದ್ಧ ಬಿಲ್ ತಂದು ಜನರಿಗೆ ಆಸರೆ ಆಗಲಿ” ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.