ಕೂಡಲ ಸಂಗಮದ ಜಯಮತ್ಯುಂಜಯ ಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಇದೇ ಡಿಸೆಂಬರ್ 10ರಂದು ನಡೆಯಲಿರುವ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ಮೂಲಕ ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಹಾಕುವ ಏಳನೇ ಹಂತದ ಹೋರಾಟಕ್ಕೆ ದಾವಣಗೆರೆ ಜಿಲ್ಲೆಯಿಂದ ಒಂದು ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್ ವಿ ಅಶೋಕ್ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “2ಎ ಮೀಸಲಾತಿಗಾಗಿ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಾಲ್ಕು ವರ್ಷದಿಂದ ಆರನೇ ಹಂತದವರೆಗೂ ಹೋರಾಟ ಮಾಡಿದ್ದೇವೆ. ಸರ್ಕಾರ ಈ ಹಿಂದೆ 2ಎ ಮೀಸಲಾತಿಗೆ ನಡೆದ ಹೋರಾಟದ ಸಮಯದಲ್ಲಿ ಕೇವಲ ಭರವಸೆಯನ್ನು ನೀಡುತ್ತ, ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ” ಎಂದರು.

“ಪಂಚಮಸಾಲಿ ಸಮಾಜ ಬೇಸತ್ತಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ಅಧಿವೇಶನದಲ್ಲಿಯೇ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದಲ್ಲಿ ಸಮಾಜದ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಜೆಪಿ ಪ್ರವಾಸ ಪೋಸ್ಟರ್‌ನಲ್ಲಿ ವಿಜಯೇಂದ್ರ ಫೋಟೋ ನಾಪತ್ತೆ; ಗೊತ್ತೇ ಇಲ್ಲವೆಂದ ಮಾಜಿ ಸಚಿವ
“ಕೂಡಲಸಂಗಮ ಶ್ರೀಗಳ ನೇತೃತ್ವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಯಕತ್ವದಲ್ಲಿ ಈ ಹೋರಾಟ ಏಳನೇ ಹಂತ ತಲುಪಿದೆ. ಈ ಹೋರಾಟಕ್ಕೆ ರಾಜ್ಯದ ಎಲ್ಲ ಪಂಚಮಸಾಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮುತ್ತಿಗೆ ಹೋರಾಟ ಯಶಸ್ವಿ ಮಾಡಬೇಕು” ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಮಹಾಸಭಾದ ಪದಾಧಿಕಾರಿಗಳಾದ ಮಂಜು ಪೈಲ್ವಾನ್, ಎಚ್ ಕೆ ಗಿರೀಶ್ ಮರಡಿ, ಶಂಕರ್, ವೀರೇಶ್ ಇದ್ದರು.