ರಾಜ್ಯದ ಎಲ್ಲ ವರ್ಗದ ಸನ್ನದುದಾರರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಬಿ ಗೋವಿಂದರಾಜ್ ಹೆಗ್ಡೆ ಒತ್ತಾಯಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಸುಮಾರು 12,500 ಪರವಾನಗಿಗಳನ್ನು ನೀಡಲಾಗಿದೆ. ಇವರೆಲ್ಲರ ಪರವಾಗಿ ಅಸೋಸಿಯೇಷನ್ ದನಿ ಎತ್ತುತ್ತಾ ಬಂದಿದೆ. ಹೊಸ ಸರ್ಕಾರಕ್ಕೆ ಜೂನ್ ಹಾಗೂ ಜನವರಿಯಲ್ಲಿ ಮನವಿ ನೀಡಲಾಗಿದೆ. ಮನವಿಯಲ್ಲಿ ಬೇಡಿಕೆ, ಸಮಸ್ಯೆ, ಸಲಹೆಗಳು ಹಾಗೂ ಕಾನೂನು ತಿದ್ದುಪಡಿ ಕುರಿತು ಮಾಹಿತಿ ನೀಡಲಾಗಿದೆ” ಎಂದರು.
“ಪ್ರಮುಖ ಬೇಡಿಕೆಗಳಾಗಿ ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಟ ಶೇ.20ರಷ್ಟು ಲಾಭಾಂಶ ನೀಡುವಂತೆ ಮನವಿ ಮಾಡಲಾಗಿದೆ. ಹೆಚ್ಚುವರಿ ಮಾಡಿರುವ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು. ಸಿಎಲ್2ಗಳಲ್ಲಿ ಮದ್ಯ ಸೇವಿಸಲು ಅವಕಾಶ ನೀಡಬೇಕು. ಸಿಎಲ್9ರಲ್ಲಿ ಮಾತ್ರ ಹೆಚ್ಚುವರಿ ಕೌಂಟರ್‌ಗಳನ್ನು ಶುಲ್ಕ ವಿಧಿಸಿ ನೀಡಬೇಕೆಂಬ ಹಲವು ಬೇಡಿಕೆಗಳನ್ನು ಮನವಿಯಲ್ಲಿ ವಿವರಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಈ ಸಂಬಂಧ ಮೇಜರ್ ಸರ್ಜರಿಯ ಅಗತ್ಯವಿದ್ದು, ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆಬ್ರವರಿ 22ರ ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10.30ಕ್ಕೆ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಆರಂಭವಾಗಿ, ಫ್ರೀಡಂ ಪಾರ್ಕ್‌ವರೆಗೆ ನಡೆಯಲಿದೆ. ನಂತರ ಪ್ರತಿಭಟನೆ ನಡೆಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಫೆ.13ರಿಂದ ಸ್ವಚ್ಛತಾ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಸುದ್ದಿಗೋಷ್ಟಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಎಸ್ ಗುರುಸ್ವಾಮಿ, ಖಜಾಂಚಿ ಟಿ ಎಂ ಮೆಹರ್ವಾಡೆ, ರಾಮುಲು ಬಳ್ಳಾರಿ, ಆಶೋಕ್ ಗುತ್ತೆದಾರ್, ಬಾಬು ರೆಡ್ಡಿ, ರಾಜೇಂದ್ರ ಭೂತೆ, ರಾಮುಲು ರೆಡ್ಡಿ, ತಿಮ್ಮಪ್ಪ, ವೆಂಕಟೇಶ್ ಹಾಗೂ ಜಿಲ್ಲಾಧ್ಯಕ್ಷ ಈಶ್ವರ್ ಸಿಂಗ್ ಇದ್ದರು.