ಭದ್ರಾ ಡ್ಯಾಂನ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕು ಎಂದು ಆಗ್ರಹಿಸಿ ಭಾರತೀಯ ರೈತ ಒಕ್ಕೂಟ ಸೋಮವಾರ ಬೆಳಿಗ್ಗೆ ದಾವಣಗೆರೆ ಬಂದ್ ಮಾಡಿದ್ದು, ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದ ಜಯದೇವ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ 7.30ಕ್ಕೆ ಜಮಾವಣೆಗೊಂಡ ಸಾವಿರಾರು ಸಂಖ್ಯೆಯ ರೈತರು ಪ್ರತಿಭಟನಾ ಸಭೆ ನಡೆಸಿದ್ದು, ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಮೂಲಕ ತೆರಳಿ ಅಂಗಡಿ ಮುಂಗಟ್ಟುಗಳ ಬಂದ್ಗೆ ಮನವಿ ಮಾಡಿದ್ದಾರೆ. ಈ ನಡುವೆ ಬಂದ್‌ಗೆ ಬಿಜೆಪಿಯೂ ಬೆಂಬಲ ನೀಡಿದೆ.
“ಬಂದ್ ನಡೆಸಿ ಜನರಿಗೆ ತೊಂದರೆ ಉಂಟುಮಾಡುವ ಉದ್ದೇಶವಿಲ್ಲ. ಶಿವಮೊಗ್ಗದ ಕಾಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ನೀರಾವರಿ ಸಲಹಾ ಸಮಿತಿಯು ನೂರು ದಿನಗಳ ಕಾಲ ಭದ್ರಾ ಡ್ಯಾಂನ ಬಲದಂಡೆ ಹಾಗೂ ಎಡದಂಡೆ ನಾಲೆಯಲ್ಲಿ ನೀರು ಹರಿಸಲು ನಿರ್ಧರಿಸಲಾಗಿತ್ತು. ಆಗಸ್ಟ್ 10ರಿಂದ ನೀರನ್ನೂ ಹರಿಸಲಾಗುತಿತ್ತು. ಆದರೆ, ಕಳೆದ ಕೆಲ ದಿನಗಳಿಂದ ನೀರು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಭತ್ತದ ಬೆಳೆ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ” ಎಂದು ಭಾರತೀಯ ರೈತ ಒಕ್ಕೂಟದ ಪ್ರಮುಖರಾಗಿರುವ ಶಾಮನೂರು
ಲಿಂಗರಾಜ್ ಆತಂಕ ವ್ಯಕ್ತಪಡಿಸಿದರು.

“ಭತ್ತಕ್ಕೆ ಈ ಸಮಯದಲ್ಲಿ ಹೆಚ್ಚಾಗಿ ನೀರು ಬೇಕಿದೆ. ಆದ್ದರಿಂದ ಕೊಟ್ಟ ಮಾತಿನಂತೆ, ತೆಗೆದುಕೊಂಡ ನಿರ್ಧಾರದಂತೆ ನೂರು ದಿನಗಳ ಕಾಲ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಲೇಬೇಕು. ಯಾವುದೇ ಸಬೂಬು ಬೇಡ. ಆನ್ ಅಂಡ್ ಆಫ್ ಪದ್ಧತಿ ಕೈಬಿಡಬೇಕು. ಭದ್ರಾ ಜಲಾಶಯದಲ್ಲಿ ಸದ್ಯಕ್ಕೆ 161 ಅಡಿ ನೀರು ಇದೆ. ಕುಡಿಯುವ ನೀರಿಗೆ 7 ಟಿಎಂಸಿ ತೆಗೆದಿಟ್ಟರೂ ಕೂಡ ಉಳಿದ ನೀರು ಬೆಳೆಗೆ ಹರಿಸಬಹುದು. ಬೇಸಿಗೆ ಬೆಳೆಗೂ ನೀರು ನೀಡಬಹುದು” ಎಂದರು.
“ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತನ್ನ ಜಿಲ್ಲೆಯ ರೈತರ ಹಿತ ಕಾಪಾಡಲು ಈ ರೀತಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಈ ದಿಟ್ಟ ಕ್ರಮ ತೆಗೆದುಕೊಳ್ಳಲೇಬೇಕು. ನಮಗೆ ಬಾಯಿ ಮಾತಿನ ಭರವಸೆ ಬೇಡವೇ ಬೇಡ. ಲಿಖಿತವಾಗಿ ಮಾಹಿತಿ ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

“ಬೆಳಿಗ್ಗೆಯಿಂದಲೇ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳು ಮುಚ್ಚಿದ್ದವು. ರೈತರ ಹಿತಕ್ಕಾಗಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ. ದಾವಣಗೆರೆ ಭದ್ರಾ ಅಚ್ಚುಕಟ್ಟುದಾರರ ಪರವಾಗಿ ನಾವು ನಡೆಸುತ್ತಿರುವ ಹೋರಾಟ ಬೆಂಬಲಿಸಿ. ಈ ಮೂಲಕ ಸರ್ಕಾರಕ್ಕೆ ಒತ್ತಡ ಹೇರುವ ಕೆಲಸ ಮಾಡೋಣ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ದಲಿತರ ಬೀದಿಯಲ್ಲಿ ಮೂಲ ಸೌಕರ್ಯ ಮರೀಚಿಕೆ; ಜನಪ್ರತಿನಿಧಿಗಳ ನಿರ್ಲಕ್ಷ್ಯ
ದಾವಣಗೆರೆ ಚೇಂಬರ್ ಆಫ್ ಕಾಮರ್ಸ್, ದಲ್ಲಾಳಿ ಮಾಲೀಕರ ಸಂಘ, ಕೂಲಿ ಕಾರ್ಮಿಕರ ಸಂಘ, ಖಾಸಗಿ ಬಸ್‌ಗಳ ಮಾಲೀಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು, ಆಟೋ ಮಾಲೀಕರ ಸಂಘ, ಕ್ರಿಮಿನಾಶಕ, ರಸಗೊಬ್ಬರ ಜಿಲ್ಲಾ ಸಂಘ, ಆಮ್ ಆದ್ಮಿ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್, ಕುಂದುವಾಡದ ಅಣ್ಣಪ್ಪ, ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರು ಲಿಂಗರಾಜ್, ಕಲ್ಲಿಂಗಪ್ಪ, ಬಸವರಾಜ್, ಮೋಹನ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡು ಪ್ರತಿಭಟನೆ ನಡೆಸಿದ್ದಾರೆ.