ಬಾಕಿ ಹಣ ಪಾವತಿ, ಮಕ್ಕಳಿಗಾಗಿ ಉಪಯೋಗಿಸುವ ವಿವಿಧ ಪರಿಕರಗಳು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್ ದಾವಣಗೆರೆ ತಾಲೂಕು ಸಮಿತಿಯಿಂದ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, “ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡಬೇಕು, ಮಳೆಗಾಲದಲ್ಲಿ ಸೊಳ್ಳೆ ಹೆಚ್ಚಿರುವುದರಿಂದ ಮಕ್ಕಳ ಸುರಕ್ಷತೆಗೆ ಸೊಳ್ಳೆ ಪರದೆ ಕೊಡಬೇಕು. ಜತೆಗೆ ಕೇಂದ್ರದ ಒಳಗೆ ಹೊರಗೆ ಸ್ವಚ್ಛತೆ ಮಾಡಿಸಿಕೊಡಬೇಕು” ಎಂದು ಒತ್ತಾಯಿಸಿದರು.
“ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮೂರು ತಿಂಗಳ ಗೌರವಧನ ಬಾಕಿಯಿದೆ. ಮೊಟ್ಟೆ ಹಣ, ಕೇಂದ್ರದ 5 ತಿಂಗಳು ಬಾಡಿಗೆ ಹಣ ಬಾಕಿಯಿದೆ. ಇವುಗಳನ್ನು ಶೀಘ್ರ ಬಿಡುಗಡೆ ಮಾಡಬೇಕು. ಲೋಟ, ತಟ್ಟೆ, ಚಮಚ ಸೇರಿದಂತೆ ಇತರೆ ಪಾತ್ರೆಗಳು ಹಾಗೂ ಮಕ್ಕಳಿಗೆ ಹಾಸುವ ಜಮ್ಖಾನಗಳನ್ನು ಹೊಸದಾಗಿ ಪೂರೈಸಬೇಕು” ಎಂದು ಒತ್ತಾಸಿದ ಅವರು, ʼಆರೋಗ್ಯ ಕುಟುಂಬʼ ಸಮೀಕ್ಷೆ ಮಾಡಿ ಒಂದು ವರ್ಷವಾದರೂ ಹಾಗೂ ಗ್ಯಾರಂಟಿ ಸರ್ವೆ ಮಾಡಿ ಆರು ತಿಂಗಳಾದರೂ ಹಣ ಹಾಕಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಲಂಗಳ ಮೂಲ ಸೌಲಭ್ಯಕ್ಕೆ ಅನುದಾನ ಮಂಜೂರು ಮಾಡುವಂತೆ ಆಗ್ರಹ
ಈ ವೇಳೆ ಫೆಡರೇಷನ್ ಮುಖಂಡರಾದ ಆವರಗೆರೆ ಚಂದ್ರು, ನಿರ್ಮಲಾ, ಗೀತಾ, ಸುಧಾ, ಸರ್ವಮ್ಮ, ಮಂಜುಳಾ, ರೇಖಾ,
ರಾಜ್ಯ ಸಂಚಾಲಕ ಆವರಗೆರೆ ವಾಸು ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.
