ದೇಶದ ಸಂಪತ್ತನ್ನು ರಕ್ಷಿಸಿ, ಜನರ ಬದುಕನ್ನು ಉಳಿಸುವ ಪರ್ಯಾಯ ನೀತಿಗಳಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನವೆಂಬರ್ 26ರಿಂದ 28ರವರೆಗೆ ದೇಶಾದ್ಯಂತ ಎಲ್ಲ ರಾಜಭವನಗಳ ಮುಂದೆ ಸಹಸ್ರಾರು ಜನರು ಮಹಾಧರಣಿ ನಡೆಸಲು ಎಸ್‌ಕೆಎಂ-ಜೆಸಿಟಿಯು ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆಯ ಜಯದೇವ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ನೇತೃತ್ವದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದರು.
ಸಮಿತಿ ಸಂಚಾಲಕ ಆವರಗೆರೆ ಉಮೇಶ್ ಮಾತನಾಡಿ, “ಕೇಂದ್ರ ಸರ್ಕಾರ ‘ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ’ ಮೂಲಕ ದೇಶದ ಸಂಪತ್ತಾದ ವಿದ್ಯುತ್, ರೈಲ್ವೆ, ಕಲ್ಲಿದ್ದಲು, ದೂರ ಸಂಪರ್ಕ, ವಿಮಾ ಕ್ಷೇತ್ರ, ವಿಮಾನಯಾನ, ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕೈಗಾರಿಕೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಸೇವೆ ಒದಗಿಸಬೇಕಾದ ಅಗತ್ಯ ವಲಯಗಳಾದ ಆರೋಗ್ಯ, ಶಿಕ್ಷಣ, ಸಾರಿಗೆ, ಆಹಾರ, ನೀರು, ಭೂಮಿ, ಗಣಿ, ಅರಣ್ಯ ಸೇರಿದಂತೆ ಎಲ್ಲವನ್ನೂ ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸಿ ಸೇವೆಯನ್ನು ಸರಕಾಗಿಸಲು ಹೊರಟಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಲವು ಯೋಜನೆಗಳನ್ನು ದುರ್ಬಲಗೊಳಿಸುತ್ತಿದ್ದು, ಸರ್ಕಾರದ ಇಂತಹ ಜನ ವಿರೋಧಿ ಕ್ರಮಗಳು ಕಾರ್ಪೊರೇಟ್ ವರ್ಗದ ಸಂಪತ್ತು ಮತ್ತು ಆದಾಯವನ್ನು ಗಣನೀಯವಾಗಿ ಹೆಚ್ಚಿಸಿದ್ದು, ಶೋಷಿತ ಜನ ಸಮೂಹದ ಜೀವನ ಮಟ್ಟವನ್ನು ದಾರಿದ್ರಕ್ಕೆ ತಳ್ಳಲ್ಪಟ್ಟಿದೆ. ರಾಷ್ಟ್ರೀಯ ಆದಾಯದಲ್ಲಿ ಭಾರತದ ಅತ್ಯಂತ ಮೇಲ್ತರದ ಶೇ.1 ರಷ್ಟು ಜನ ಶೇ.40.5 ರಷ್ಟು ಒಡೆತನ ಹೊಂದಿದ್ದರೆ, ಶೇ.50ರಷ್ಟು ಸಾಮಾನ್ಯ ಜನರ ಒಡೆತನ ಶೇ.3ಕ್ಕೆ ಕುಸಿದಿದ್ದು, ನಿರುದ್ಯೋಗ, ಬಡತನ, ಹಸಿವು, ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆ ಹೆಚ್ಚಾಗುತ್ತಿದೆ” ಎಂದರು.
“ರೈತರ ಉತ್ಪನ್ನಗಳಿಗೆ ಎಂ ಎಸ್ ಸ್ವಾಮಿನಾಥನ್ ಶಿಫಾರಸಿನ ಸೂತ್ರ ಸಿ2+50% ಪ್ರಕಾರ ಕನಿಷ್ಠ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಒದಗಿಸುವ ಶಾಸನ ಜಾರಿ ಮಾಡಬೇಕು. ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳವಾಗಬೇಕು. ರೈತರ ಆತ್ಮಹತ್ಯೆ ತಡೆಯಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಕನಿಷ್ಠ ವೇತನ ಮಾಸಿಕ ₹26,000 ನಿಗದಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಖಾಯಂ ಸ್ವರೂಪದ ಕೆಲಸದಲ್ಲಿ ತೊಡಗುವ ಕಾರ್ಮಿಕರ ಖಾಯಂಗೆ ಶಾಸನ ರೂಪಿಸಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು, ಎಫ್‌ಟಿಇ ಪದ್ಧತಿಯನ್ನು ಹಾಗೂ ಕೆಲಸದ ಅವಧಿಯ ಹೆಚ್ಚಳವನ್ನು ರದ್ದುಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೆಲಸ ಮಾಡದ ಅಧಿಕಾರಿಗಳನ್ನು ಎಚ್ಚರಿಸಲು ನಿದ್ದೆ ಚಳುವಳಿ ಹಮ್ಮಿಕೊಂಡ ರೈತರು
ಈ ವೇಳೆ ಕೆ ಎಚ್ ಆನಂದರಾಜ್, ಮಧು ತೊಗಲೇರಿ, ಮಂಜುನಾಥ್ ಕುಕ್ಕವಾಡ, ಹನುಮಂತಪ್ಪ, ಐರಣಿ ಚಂದ್ರು ಸೇರಿದಂತೆ ಇತರರು ಇದ್ದರು.