ದಾವಣಗೆರೆ ಜಿಲ್ಲೆಯ ಭಾನುವಳ್ಳಿ, ಚನ್ನಗಿರಿ ಗಲಾಟೆಯಲ್ಲಿ ಜಿಲ್ಲಾಧಿಕಾರಿ ಕೆಲವರ ಏಜೆಂಟರಂತೆ ವರ್ತನೆ ಮಾಡುತ್ತಿದ್ದಾರೆ. ಜಿಲ್ಲೆ ಶಾಂತವಾಗಿರಲು ಬಿಡದೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣರಾಗುತ್ತಿದ್ದು, ಇಂತಹ ಅಧಿಕಾರಿ ವಿರುದ್ಧ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹರಿಹರ ಬಿಜೆಪಿ ಶಾಸಕ ಬಿ ಪಿ ಹರೀಶ ಕಿಡಿಕಾರಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಚನ್ನಗಿರಿಯ ವೃತ್ತವೊಂದರಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ತೆರವು ಮಾಡಿದ್ದರು. ಈಗ ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ವೀರ ಮದಕರಿ ನಾಯಕ ವೃತ್ತದ ವಿಚಾರದಲ್ಲಿ ಜಿಲ್ಲಾಧಿಕಾರಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದ್ದಾರೆ. ಜಿಲ್ಲಾಧಿಕಾರಿ ಕುಮ್ಮಕ್ಕಿನಿಂದ ಭಾನುವಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಒತ್ತಡ ಹೇರಿ, ಸಂಗೊಳ್ಳಿ ರಾಯಣ್ಣ ವೃತ್ತವೆಂದು ನಿರ್ಣಯ ಮಾಡಿಸಿದ್ದಾರೆ. ಜಿಲ್ಲಾಧಿಕಾರಿ ಕೆಲವರ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ” ಎಂದರು.
“ಲೋಕೋಪಯೋಗಿ ಇಲಾಖೆ ರಸ್ತೆಯ ಮಧ್ಯ ಭಾಗದಿಂದ 21 ಮೀಟರ್ ಯಾವುದೇ ಕಾರ್ಯ ಮಾಡುವಂತಿಲ್ಲ. ಆದರೆ, ಕಾನೂನು ಪಾಲನೆ ಮಾಡಬೇಕಾದ ಜಿಲ್ಲಾಧಿಕಾರಿಯೇ ಭಾನುವಳ್ಳಿ ವಿಚಾರದಲ್ಲಿ ಎಲ್ಲವನ್ನೂ ಧಿಕ್ಕರಿಸಿದ್ದಾರೆ. ರಸ್ತೆ ಮಧ್ಯಭಾಗದಿಂದ ಕೇವಲ 7 ಮೀಟರ್‌ನಲ್ಲಿ ಪುತ್ಥಳಿ ಪ್ರತಿಷ್ಠಾಪಿಸಲು ಕಾರಣರಾಗಿದ್ದಾರೆ” ಎಂದರು.
“ಭಾನುವಳ್ಳಿ ಗ್ರಾಮದಲ್ಲಿ 1990ರಲ್ಲೇ ಆಗಿನ ಶಾಸಕ ಎಚ್ ಶಿವಪ್ಪ ಅವರ ಅವಧಿಯಲ್ಲಿ ವೀರ ಮದಕರಿ ನಾಯಕ ಮಹಾದ್ವಾರ ನಿರ್ಮಾಣವಾಗಿ, ನಾಮಕರಣವಾಗಿತ್ತು. ಎಸ್‌ಸಿ/ಎಸ್‌ಟಿ ಅನುದಾನದಲ್ಲಿ ₹1.30 ಲಕ್ಷ ವೆಚ್ಚದಲ್ಲಿ ವೃತ್ತ ನಿರ್ಮಿಸಿದ್ದು, ನಂತರ ಸಮಾಜ ಕಲ್ಯಾಣ ಸಚಿವರಾಗಿದ್ದ ಡಾ ವೈ ನಾಗಪ್ಪ ಉದ್ಘಾಟಿಸಿದ್ದರು. 2021ರಲ್ಲಿ ಜಿಲ್ಲಾ ಪಂಚಾಯತ್ ₹92,000 ಅನುದಾನ ಸ್ಲ್ಯಾಬ್ ನಿರ್ಮಾಣಕ್ಕೆ ಬಂದಿತ್ತು. ಈಚೆಗೆ ಅದೇ ವೃತ್ತದಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪಿಸಿದ್ದರಿಂದ ಗ್ರಾಮದಲ್ಲಿ ಉಭಯ ಸಮುದಾಯದ ಜನರ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗೋಮಾಳ ಜಮೀನು ವಿವಾದ; ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ
“ವೀರ ಮದಕರಿ ನಾಯಕ ವೃತ್ತವೆಂದು ವಾಲ್ಮೀಕಿ ನಾಯಕ ಸಮಾಜದವರು ಪ್ರತಿಭಟಿಸಿದ್ದರು. 2 ದಿನ ಹೋರಾಟದ ನಂತರ ಜಿಲ್ಲಾಧಿಕಾರಿಯವರು 3 ದಿನಗಳ ಕಾಲಾವಕಾಶ ಕೋರಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ, 3 ದಿನದ ನಂತರ 10 ದಿನ ಕಾಲ ಕೇಳಿ, ಮತ್ತೆ 3 ದಿನ ಸಮಯಾವಕಾಶ ಕೇಳಿದ ಜಿಲ್ಲಾಧಿಕಾರಿ ಸಮಸ್ಯೆ ಪರಿಹರಿಸುವ ಬದಲಿಗೆ, ಅದನ್ನು ಜೀವಂತವಾಗಿಟ್ಟು, ಕೋಮುಗಳ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ನಮಗೆ ಮಹರ್ಷಿ ವಾಲ್ಮೀಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಮದಕರಿ ನಾಯಕರಂತಹ ಮಹನೀಯರ ಬಗ್ಗೆ ಅಪಾರ ಗೌರವ, ಅಭಿಮಾನವಿದೆ. ಆದರೆ, ಜಿಲ್ಲಾಧಿಕಾರಿ ಸಮಸ್ಯೆ ಪರಿಹರಿಸುವ ಬದಲು, ಯಾರದ್ದೋ ಏಜೆಂಟರಂತೆ ವರ್ತಿಸಿದ್ದು ಅಕ್ಷಮ್ಯ” ಎಂದು ಕಿಡಿಕಾರಿದರು.
ಹರಿಹರ ನಗರ ಘಟಕದ ವಾಲ್ಮೀಕಿ ನಾಯಕ ಟ್ರಸ್ಟ್‌ನ ಪದಾಧಿಕಾರಿಗಳು, ನಾಯಕ ಸಮಾಜದ ಮುಖಂಡರು ಇದ್ದರು.