ವಿರೋಧಪಕ್ಷ ಸದಸ್ಯರ ವಾರ್ಡ್ ಎಂದು ತಾರತಮ್ಯ ಮಾಡಬೇಡಿ, ನಿಮಗೂ ಅಲ್ಲಿ ಮತದಾರರಿದ್ದಾರೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್, ಪಾಲಿಕೆ ಸದಸ್ಯೆ ಉಮಾ ಪ್ರಕಾಶ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಮುನ್ನ ಮಾತನಾಡಿದ ಅವರು, “ಪಾಲಿಕೆಗೆ ಬಂದಿರುವ 15ನೇ ಹಣಕಾಸು ಯೋಜನೆಯಲ್ಲಿ ನಮ್ಮ 32ನೇ ವಾರ್ಡಿಗೆ ರಸ್ತೆ ಕಾಮಗಾರಿ ಕೈಗೊಳ್ಳಲು ಕಡಿಮೆ ಅನುದಾನ ನೀಡಲಾಗಿದೆ. ಅತ್ಯಂತ ದೊಡ್ಡ ವಾರ್ಡ್‌ಗಳಿಗೆ ಒಂದಾಗಿರುವ 32ನೇ ವಾರ್ಡ್‌ನಲ್ಲಿ 100 ಕೋಟಿ ರೂ. ವೆಚ್ಚದಷ್ಟು ಅಭಿವೃದ್ಧಿ ಕಾಮಗಾರಿಯಾಗಬೇಕಾಗಿದೆ. ಆದರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತದ ಅಧಿಕಾರದಲ್ಲಿ 32ನೇ ವಾರ್ಡ್‌ಗೆ ಕೇವಲ 15 ಲಕ್ಷ ರೂಪಾಯಿ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ” ಎಂದರು.
“32ನೇ ವಾರ್ಡ್ ಸೇರಿದಂತೆ ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರು ಪ್ರತಿನಿಧಿಸುತ್ತಿರುವ ಎರಡ್ಮೂರು ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದಂತೆ ಬಿಜೆಪಿ ಸದಸ್ಯರ ವಾರ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ ಕಡಿಮೆ ಅನುದಾನ ನೀಡಿ ಬಿಜೆಪಿ ವಾರ್ಡ್‌ಗಳಿಗೆ ತಾರತಮ್ಯ ಮಾಡಲಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ಮಹಾನಗರ ಪಾಲಿಕೆ ಅಭಿವೃದ್ಧಿ ಕಾಮಗಾರಿಗಳಿಗೆ ವಾರ್ಡ್‌ವಾರು ಅನುದಾನ ನೀಡಿದ್ದು, ಒಂದೆರಡು ವಾರ್ಡ್‌ಗಳನ್ನು ಬಿಟ್ಟರೆ ಮಹಾನಗರ ಪಾಲಿಕೆಯ 32, 33, 39 41, 42 ಹೀಗೆ ಅನೇಕ ನಗರದ ಹೊರಭಾಗದ ವಾರ್ಡ್‌ಗಳಲ್ಲಿ ಹೆಚ್ಚಿನ ಕಾಮಗಾರಿ ಅವಶ್ಯಕತೆ ಇರುತ್ತದೆ” ಎಂದರು.
“ಉಚಿತ ಗ್ಯಾರಂಟಿಗಳಿಂದಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 32ನೇ ವಾರ್ಡ್ ಸಹ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಕೊಟ್ಟಿದೆ. ಕೇವಲ ಬಿಜೆಪಿ ಸದಸ್ಯ ಪ್ರತಿನಿಧಿಸುವ ವಾರ್ಡ್ ಎಂಬ ಕಾರಣಕ್ಕೆ ವಾರ್ಡ್‌ಗೆ ಹೆಚ್ಚಿನ ಅನುದಾನ ನೀಡಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗುವುದು” ಎಂದು ಉಮಾ ಪ್ರಕಾಶ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕಾಂಗ್ರೆಸ್ನಲ್ಲಿ ಭಿನ್ನಮತ; ಪಾಲಿಕೆ ಸದಸ್ಯರ ವಿರುದ್ಧ ಅಬ್ಬಯ್ಯ ಅಸಮಾಧಾನ
“ಸುಮಾರು ಮೂರು ವರ್ಷಗಳಿಂದ 32ನೇ ವಾರ್ಡಿನ ರೈಲ್ವೆ ಟ್ರ್ಯಾಕ್ ಬಳಿ ಇರುವ ಸರ್ವೇ ನಂಬರ್ 2042 243- 244ರಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ನಕಾಶೆ ಪ್ರಕಾರ ಬಯಲು ಜಾಗ ಬಿಟ್ಟಿದ್ದು, ಸದರಿ ಬಯಲು ಜಾಗಕ್ಕೆ ಮಹಾನಗರ ಪಾಲಿಕೆಯಿಂದ 2017-18ರ ಸಮಯದಲ್ಲಿ ಅಕ್ರಮ ಡೋರ್ ನಂಬರ್‌ಗಳನ್ನು ನೀಡಿದ್ದು, ಅವುಗಳನ್ನು ರದ್ದುಪಡಿಸುವಂತೆ ಪ್ರತಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರೂ ಈವರೆಗೆ ರದ್ದುಪಡಿಸಲು ಕ್ರಮ ಕೈಗೊಂಡಿಲ್ಲ. ಅದನ್ನೂ ಕೂಡ ಪ್ರಸ್ತಾಪಿಸಿ ಆದಷ್ಟು ಬೇಗ ಅಕ್ರಮ ಡೋರ್ ನಂಬರ್‌ಗಳನ್ನು ರದ್ದುಪಡಿಸಿ ಮಹಾನಗರ ಪಾಲಿಕೆ ವಶಕ್ಕೆ ಪಡೆದುಕೊಂಡು ಬೇಲಿ ಹಾಕಿಸಿ, ಸಾರ್ವಜನಿಕ ಉಪಯೋಗಕ್ಕೆ ಸದರಿ ಬಯಲು ಜಾಗವನ್ನು ಅಭಿವೃದ್ಧಿಪಡಿಸಲು ಒತ್ತಾಯಿಸಲಾಗುವುದು” ಎಂದು ತಿಳಿಸಿದ್ದಾರೆ.