ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ, ಮುಂದೆ ಉತ್ತಮ ಮಳೆಯಾಗುತ್ತದೆಂದು ಭಾವಿಸಿದ್ದ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಆದರೆ, 15 ದಿನಗಳಿಂದ ಮಳೆ ಬಾರದ ಪರಿಣಾಮ ಬೆಳೆ ನಾಶವಾಗುತ್ತಿದ್ದು, ಮಳೆಗಾಗಿ ರೈತರು ಎದುರು ನೋಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕೊಗ್ಗನೂರು ಗ್ರಾಮದ ರೈತರು ಮಳೆಗಾಗಿ ದೇವರ ಮೊರೆ ಹೋಗಿದ್ದು, ದೇವರಿಗೆ ನೀರಿನ ಅಭಿಷೇಕ ಮಾಡುವ ಮೂಲಕ, ಮಳೆ ಬೀಳಲೆಂದು ಪ್ರಾರ್ಥಿಸಿದ್ದಾರೆ.
ಕೊಗ್ಗನೂರು ಗ್ರಾಮಸ್ಥರು ತಮ್ಮ ಗ್ರಾಮದಲ್ಲಿರುವ ಪ್ರಮುಖ ದೇವಾಲಯಗಳಿಗೆ ತೆರಳಿ ಆಂಜನೇಯ, ಬೀರಲಿಂಗೇಶ್ವರ, ದುರ್ಗಾಂಬಿಕಾ ದೇವಿ, ಕರಗಲ್ಲು, ದುಂಡಿದುರ್ಗಮ್ಮ ದೇವತೆಗಳಿಗೆ ಬಿಂದಿಗೆಗಳಲ್ಲಿ ನೀರಿನ ಅಭಿಷೇಕ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮದ ರೈತಸಂಘದ ಮುಖಂಡರೊಬ್ಬರು, “ಈ ಹಿಂದೆ ಮಾನವನ ಉತ್ತಮ ಗುಣಗಳಾದ ಜಾನುವಾರು ಸಾಕಾಣಿಕೆ, ಹೈನುಗಾರಿಕೆ, ಕಾಡುಗಳ ರಕ್ಷಣೆ, ಗಿಡಮರಗಳನ್ನು ಬೆಳೆಸುವ, ವ್ಯವಸಾಯದ ಸಾಂಪ್ರದಾಯಿಕತೆ ಪಾಲಿಸುವ ಮೂಲಕ ಪ್ರಕೃತಿ ಉತ್ತಮ ಮಳೆ ಸುರಿದು ರೈತರು ಸಂತಸದ ಬೆಳೆ ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನ ದುರಾಸೆಗೆ ಪ್ರಕೃತಿ ನಾಶಕ್ಕೆ ಮುಂದಾಗಿದ್ದಾರೆ. ಈ ಕಾರಣ ಅಕಾಲಿಕ ಮಳೆ, ಅನಾವೃಷ್ಟಿ ಎದುರಾಗಿದೆ. ಇದನ್ನು ನಿವಾರಿಸಲು ಉತ್ತಮ ಮಳೆ ಬೆಳೆ ನೀಡಲು ದೇವರ ಮೊರೆ ಹೋಗುತ್ತಿದ್ದೇವೆ” ಎಂದು ತಿಳಿಸಿದರು.
ಪ್ರಾರ್ಥನೆ ಸಲ್ಲಿಸುವ ವೇಳೆ ರೈತ ಕೆ. ಹನುಮಂತ, ಆಕಾಶ್ ಕೆಪಿ, ಸಿದ್ದೇಶ್, ಎಂ, ದರ್ಶನ್ ಎಂ. ಶಿವು ಆರ್, ಸಿದ್ದೇಶ್, ಹಾಗೂ ಹಿರಿಯರು ಮುಖಂಡರು ಮಹಿಳೆಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.