ದಲಿತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ದಿಕ್ಕು, ನೆಡೆಗೆ ಸಂಬಂಧಿಸಿದಂತೆ ಚರ್ಚಿಸಲು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನವು(AIDRM) ಕರ್ನಾಟಕದಲ್ಲಿ ತನ್ನ ಮೊದಲ ರಾಜ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಈ ಸಮ್ಮೇಳನವನ್ನು ನವೆಂಬರ್ 8, 9ರಂದು ದಾವಣಗೆರೆಯಲ್ಲಿ ಆಯೋಜಿಸಲಾಗುವುದು ಎಂದು ಎಐಡಿಆರ್‌ಎಂ ರಾಷ್ಟ್ರೀಯ ಮಂಡಳಿ ಸದಸ್ಯರಾದ ಮಹೇಶ್ ರಾಥೋಡ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಹಲವಾರು ದಲಿತ ಸಂಘಟನೆಗಳು ಅಸ್ತಿತ್ವದಲ್ಲಿವೆ. ಆ ಸಂಘಟನೆಗಳಿಗೆ ಇದು ಪರ್ಯಾಯ ಸಂಘಟನೆಯಾಗಿ ಕಾರ್ಯ ನಿರ್ವಹಿಸದೇ, ಎಲ್ಲಾ ದಲಿತ ಸಮುದಾಯಗಳ ಧ್ವನಿಯಾಗಿ ದಲಿತ ಸಮುದಾಯಗಳ ಹಕ್ಕುಗಳಿಗಾಗಿ ಜೊತೆಗೂಡಿ ಆಂದೋಲನವನ್ನು ನಡೆಸುವ ವೇದಿಕೆಯಾಗಿ ಕಾರ್ಯನಿರ್ವಹಿಸುವ ಯೋಜನೆಯನ್ನು ಇಟ್ಟುಕೊಂಡಿದ್ದೇವೆ. ದಲಿತರ ಹಕ್ಕುಗಳಿಗೆ ಹೋರಾಟ ನಡೆಸುವ ಯಾವುದೇ ಸಂಘ-ಸಂಸ್ಥೆ ನಮ್ಮ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಭಾಗವಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ತಿಳಿಸಿದರು.
ಇದು ರಾಜ್ಯದ ಎಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಆಂದೋಲನದ ವೇದಿಕೆಯಾಗಿ ರೂಪುಗೊಳ್ಳಲಿರುವ ಕಾರಣಕ್ಕಾಗಿ, ಈ ಪ್ರಥಮ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕದ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರನ್ನೂ ಸಹ ಇದು ಒಳಗೊಳ್ಳಲಿದೆ. ಈ ಸಮ್ಮೇಳನದಲ್ಲಿ ರಾಜ್ಯದ ದಲಿತ ಸಮುದಾಯಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಿ ಅವರ ಹಕ್ಕುಗಳ ರಕ್ಷಣೆಗಾಗಿ ಬಲಿಷ್ಠ ಚಳುವಳಿಯನ್ನು ಕಟ್ಟುವ ಕುರಿತು ರೂಪ ರೇಷೆಗಳನ್ನು ಸಿದ್ಧಪಡಿಸಲಾಗುವದು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಸಾರ್ವಜನಿಕ ಆಸ್ತಿ ದಲಿತರಿಗೆ ಸಮಾನವಾಗಿ ದೊರೆಯಲು ಅಗತ್ಯ ಕಾಯ್ದೆಯ ರಚನೆ, ಮಹಿಳೆಯರ ಆರೋಗ್ಯ ಮತ್ತು ರಕ್ಷಣೆ ಖಚಿತಪಡಿಸಲು, ಅವರ ಹಕ್ಕುಗಳಿಗೆ ರಕ್ಷಣೆ ಮತ್ತು ಜೀವನ ಕ್ರಮವನ್ನು ಸಮಾನವಾಗಿಸುವುದು, ಪರಿಶಿಷ್ಟ ಜಾತಿ-ಜನರ ಆಹಾರ, ಶುದ್ಧ ಕುಡಿಯುವ ನೀರು, ಬಟ್ಟೆ, ವಾಸಕ್ಕೆ ಮನೆ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಚಿಕಿತ್ಸೆ, ಸಾಮಾಜಿಕ ಭದ್ರತೆ, ಸಾಮಾಜಿಕ ಸೇವೆಗಳು, ಸಾರ್ವಜನಿಕ ಸೌಕರ್ಯಗಳು, ಸಾರ್ವಜನಿಕ ಸ್ಥಳಗಳನ್ನು ಒದಗಿಸಬೇಕು. ಗ್ರಾಮೀಣ ಭೂರಹಿತರಿಗೆ ಜೀವನಾವಶ್ಯಕ ಕೂಲಿ ಮತ್ತು ದಲಿತರಿಗೆ ಐದು ಎಕರೆ ಭೂ ಒಡೆತನವನ್ನು ನೀಡಬೇಕು. ಕೊಳವೆ ಬಾವಿ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಕಾರು ಅಡ್ಡ ಹಾಕಿದ್ದಕ್ಕೆ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನೇ ಎಳೆದೊಯ್ದ ಚಾಲಕ!
1976ರ ಜೀತ ನಿರ್ಮೂಲನಾ ಪದ್ಧತಿಯ ಜಾರಿ, ಬಾಲ ಕಾರ್ಮಿಕ ದುಡಿಮೆ ಪದ್ಧತಿಯ ರದ್ದು, ಸರ್ಕಾರದ ಎಲ್ಲಾ ಖರೀದಿ ಹಾಗೂ ಗುತ್ತಿಗೆಗಳಲ್ಲಿ ಪರಿಶಿಷ್ಟ ಜಾತಿ (ಎಸ್.ಸಿ)ಗಳಿಗೆ ಸರಿಯಾದ ಮೀಸಲಾತಿ, ನೂತನ ಶಿಕ್ಷಣ ನೀತಿ ಹಿಂತೆಗೆದುಕೊಳ್ಳಲು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಮಲ ಹೊರುವ ಹಾಗೂ ಒಳ ಚರಂಡಿ (ಮ್ಯಾನುವೇಲ್ ಸ್ಕ್ಯಾವೆಂಜರ್) ಸ್ವಚ್ಛ ಗೊಳಿಸುವ ಕೆಲಸ ಮಾಡುವುದನ್ನು ರದ್ದುಗೊಳಿಸಲು, ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಮತ್ತು ಅದಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ವಾಸು ಅವರಗೆರೆ, ರಾಜು ಕೆರೆಯಾಗಲಳ್ಳಿ, ಲಕ್ಷ್ಮಣ ವಿ, ಪರಶುರಾಮ, ಜಯಣ್ಣ, ಮಂಜು ಡಿ, ಶಾರದಮ್ಮ, ನಾಗರಾಜ, ಗುರುಮೂರ್ತಿ, ಹನುಮಂತಪ್ಪ , ಚಂದ್ರಪ್ಪ ಹಾಗೂ ಇತರರು ಹಾಜರಿದ್ದರು.
