ಎನ್‌ಡಿಎ ಮೈತ್ರಿಕೂಟದಲ್ಲಿರುವ ಜೆಡಿಎಸ್ ವರಿಷ್ಠರು ಆದೇಶ ನೀಡುವವರೆಗೂ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವವರೆಗೂ ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರು ಮೈತ್ರಿಧರ್ಮ ಪಾಲನೆ ಮಾಡಲು ಮುಂದಾಗಬಾರದು. ತಟಸ್ಥವಾಗಿರಬೇಕು ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್ ಎಸ್ ಶಿವಶಂಕರ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ಎನ್‌ಡಿಎ ಮೈತ್ರಿಕೂಟ ರಚನೆಯಾದಾಗಿನಿಂದ ಬಿಜೆಪಿಯವರು ಜೆಡಿಎಸ್ ವರಿಷ್ಠರನ್ನು ಪರಿಗಣಿಸದಿರುವುದು ಬೇಸರ ಮೂಡಿಸಿದೆ. ವರಿಷ್ಠರು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ ಮೇಲೆ ರಾಜ್ಯದಲ್ಲಿ ಬಿಜೆಪಿಗೆ ಬಲ ಬಂದಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಬಿಜೆಪಿ ನೆಲಕಚ್ಚಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸುಸ್ಥಿತಿಗೆ ಬರಬೇಕು. ದೇಶದ ಭದ್ರತೆ ಮೆತ್ತು ಐಕ್ಯತೆ, ಉಗ್ರವಾದ ಹತ್ತಿಕ್ಕಲು ನಮ್ಮ ವರಿಷ್ಠರು ಎನ್‌ಡಿಎ ಬಳಗಕ್ಕೆ ಸೇರಿದ್ದಾರೆ” ಎಂದು ಹೇಳಿದರು.
“ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ವಿತರಣೆಯಾಗಿಲ್ಲ. ಜನರ ನಿರೀಕ್ಷೆ ಹುಸಿಯಾಗಿದೆ. ಜನರು ಭ್ರಮ ನಿರಸನರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮುಂದುವರೆಯಲು ಜನರ ಆಪೇಕ್ಷೆ ಇಲ್ಲ. ಆದರೆ ವಿಧಾನಸಭಾ ಚುನಾವಣೆಯಲ್ಲಿ 130 ಸ್ಥಾನ ಬಂದಿರುವುದರಿಂದ ಕಾಂಗ್ರೆಸ್‌ನವರು ನಮಗೇ ಸಂಪೂರ್ಣ ಬೆಂಬಲವಿದೆಯೆಂಬ ಭ್ರಮೆಯಲ್ಲಿದ್ದಾರೆ” ಎಂದರು.
“ದೇಶಕ್ಕೆ ಒಳಿತಾಗಬೇಕು, ದೇಶ ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಎಚ್‌ಡಿಡಿ, ಎಚ್‌ಡಿಕೆ ರಾಜಕೀಯ ಜೀವಮಾನದಲ್ಲಿ ದೊಡ್ಡ ತೀರ್ಮಾನ ಕೈಗೊಂಡಿದ್ದಾರೆ. ಜ್ಯಾತ್ಯತೀತ ನಿಲುವುಗಳಿಗೆ ಬಿಜೆಪಿಯಿಂದ ಧಕ್ಕೆಯಾಗಬಾರದು. ನಮ್ಮ ತತ್ವ ಸಿದ್ದಾಂತ ಬದ್ಧತೆ ಬಿಟ್ಟು ಕೊಡದಂತೆ ಮೈತ್ರಿ ಮಾಡಲಾಗಿದೆ. ಆದರೆ ಎಚ್‌ಡಿಕೆಯವರನ್ನು ಹತ್ತಾರು ಬಾರಿ ದೆಹಲಿಗೆ ಕರೆದು ಮಾತನಾಡಿ ನಾಲ್ಕರಿಂದ ಮೂರು ಸೀಟು ಎಂದರು. ಆದರೆ ಅದನ್ನೇ ಘೋಷಿಸಲು ಅನುವು ಮಾಡಿಲ್ಲ. ಇದು ಬೇಸರ ಮೂಡಿಸಿದೆ” ಎಂದರು.
“ಮೈತ್ರಿಧರ್ಮ ರಾಜ್ಯದಲ್ಲಿ ಪಾಲನೆ ಯಾಗುತ್ತಿಲ್ಲ ನಮಗೆ ನೀಡಿದ ಸೀಟ್‌ಗಳಿಗೆ ಹಾಸನ, ಮಂಡ್ಯ, ಮತ್ತೊಂದರಲ್ಲಿ ಬಿಜೆಪಿಯ ಮುಖಂಡರು ತಗಾದೆ ತೆಗೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ 20 ಸ್ಥಾನಕ್ಕೆ ಅಭ್ಯರ್ಥಿ ಘೋಷಣೆಯಿಂದ ಗೊಂದಲ ಹೆಚ್ಚಾಗಿದೆ. ಮುಖಂಡರು ಅಂದುಕೊಂಡ ರೀತಿ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಸಿಗುವುದು ಅನುಮಾನವಾಗಿದೆ. ಹೆಚ್ಚು ಸ್ಥಾನ ಬೇಕಿದ್ದರೆ ಜೆಡಿಎಸ್ ಮುಖಂಡರನ್ನು ವಿಶ್ವಾಸಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿಗೆ ಪೆಟ್ಟು ಬೀಳಲಿದೆ. ಹಾಸನದ ಜೆಡಿಎಸ್ ಅಭ್ಯರ್ಥಿ ಬದಲಾಯಿಸುವಂತೆ ಮಾಜಿ ಶಾಸಕ ಪ್ರೀತಮ್ ಗೌಡ ತಗಾದೆ ತೆಗೆದಿದ್ದಾರೆ. ಇದು ಸರಿಯಲ್ಲ. ನಿಮಗೊಬ್ಬರಿಗೇ ಅಲ್ಲಾ, ನಮಗೂ ಕೂಡ ತಗಾದೆ ತೆಗೆಯಲು ಬರುತ್ತದೆ. ಪಕ್ಷಕ್ಷೆ ಹಿನ್ನೆಡೆಯಾಗಿದೆಂದ ಮಾತ್ರಕ್ಕೆ ನಾವೇನು ಶಕ್ತಿ ಕಳೆದುಕೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದಾವಣಗೆರೆ ಸಂಸದರು ಹಾಗೂ ಸಚಿವರು ಒಳ ಒಪ್ಪಂದ ಮಾಡಿಕೊಂಡಂತಿದೆ. ಅಳಿಯ ಮಾವ ಎನ್ನುತ್ತಲೇ ಸಹಕಾರ ನೀಡುತ್ತಾ ಬಂದಿದ್ದಾರೆ. ಒಂದು ಕಡೆ ಶಾಮನೂರು ಶಿವಶಂಕರಪ್ಪ ಶಿವಮೊಗ್ಗದಲ್ಲಿ ಬಿಜೆಪಿಗೆ ಮತ ಹಾಕಲು ಹೇಳುತ್ತಾರೆ. ಇನ್ನು ಇಬ್ಬರ ಒಳಒಪ್ಪಂದ ಗುಂಪುಗಾರಿಕೆ ನೋಡಿದರೆ ಪಕ್ಷದ ಅಭ್ಯರ್ಥಿ ಸೋಲಿಸಿ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಮಾತೂ ಕೂಡ ಜನರಿಂದಲೇ ಕೇಳಿ ಬರುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಸಂಸದರು ಫೋನ್ ಮಾಡಿದ್ದರು. ಈ ಬಿಜೆಪಿಯಲ್ಲಿನ ಗುಂಪುಗಾರಿಕೆ ಹಾಗೂ ಪರಿಹರಿಸಲು ಸಲಹೆ ನೀಡಿರುವೆ. ನಮಗೆ ರಾಜ್ಯ ವರಿಷ್ಠರ ಆದೇಶ ಬಾರದ ಹಿನ್ನೆಲೆಯಲ್ಲಿ ನಾವೆಲ್ಲಾ ತಟಸ್ಥರಾಗಿದ್ದೇವೆ. ಆದೇಶ ಬಂದ ಮೇಲೆ ಸಭೆ ನಡೆಸಿ ಮುಂದುವರೆಯುತ್ತೇವೆಂದು ತಿಳಿಸಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ ಚಿದಾನಂದ, ರಾಮಚಂದ್ರಮೂರ್ತಿ, ಟಿ ಅಸ್ಗರ್, ಬಾತಿ ಶಂಕರ್, ಗಾದ್ರಿ ರಾಜು, ಎನ್ ಗಂಗಾಧರಪ್ಪ, ಕುಬೇರಪ್ಪ ಎಚ್ ಕೆ ಬಸವರಾಜ್, ಉಸ್ಮಾನ್ ಶರೀಫ್, ಜೆ ಅಮಾನುಲ್ಲಾ ಖಾನ್ ಸೇರಿದಂತೆ ಇತರರು ಇದ್ದರು.
