ಪಂಚಮಸಾಲಿ ಸಮಾಜಕ್ಕೂ ಎಂಪಿಯಾಗುವ ಅರ್ಹತೆಯಿದೆ. ಬಿಜೆಪಿ ಹೈಕಮಾಂಡ್ ಇದನ್ನು ಅರಿತುಕೊಂಡು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಅಥವಾ ಬಾಗಲಕೋಟೆ ಲೋಕಸಭೆಗೆ ಪಂಚಮಸಾಲಿಗರಿಗೆ ಟಿಕೆಟ್ ನೀಡಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಒತ್ತಾಯಿಸಿದರು.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಪಂಚಮಸಾಲಿ ಮಠದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ”ಬಿಜೆಪಿಯ ಸೈದ್ಧಾಂತಿಕ ನಿಲುವುಗಳು ಚುನಾವಣೆಯ ವಸ್ತುವಾಗಿ ಹಿಂದುತ್ವದ ಬೇರುಗಳಿಂದಲೇ ತನ್ನ ರಾಜ್ಯದಲ್ಲಿ ಅಸ್ತಿತ್ವವನ್ನು ಗಟ್ಟಿ ಮಾಡಿಕೊಂಡಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವೀರಶೈವ ಲಿಂಗಾಯತ ಸಮಾಜದ ಬೆನ್ನಿಗೆ ನಿಂತಿದ್ದರಿಂದ ಮಾತ್ರ ಬಿಜೆಪಿಗೆ ಭದ್ರ ನೆಲೆ ದೊರೆತಿದೆ” ಎಂದರು.
“ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ವೀರಶೈವ ಲಿಂಗಾಯತರಲ್ಲಿಯೇ ಉಪಪಂಗಡವಾದ ಪಂಚಮಸಾಲಿ ಸಮಾಜದ ಕೊಡುಗೆ ಬೆಟ್ಟದಷ್ಟಿದೆ. ಆದರೆ ಅತಿ ಹೆಚ್ಚು ಜನಸಂಖ್ಯೆಯಿರುವ ಪಂಚಮಸಾಲಿಗೆ ನಿರೀಕ್ಷಿಸಿದಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿ. ಕರ್ನಾಟಕದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರ ಅನುಭವಿಸಿದಾಗ ಪಂಚಮಸಾಲಿಗರಿಗೆ ಮಂತ್ರಿ ಭಾಗ್ಯ ದೊರಕಿತಷ್ಟೆ. 9 ವರ್ಷಗಳ ಅವಧಿಯಲ್ಲಿ 4 ಮಂದಿ ಮುಖ್ಯಮಂತ್ರಿ ಪದವಿಗೇರಿದರು. ಅದರಲ್ಲಿ ಮೂವರು ಲಿಂಗಾಯತ ಸಮುದಾಯದಕ್ಕೆ ಸೇರಿದವರು, ಐದು ಜನ ಡಿಸಿಎಂ ಹುದ್ದೆ ಅನುಭವಿಸಿದರು. ಅದರಲ್ಲಿ ಒಬ್ಬ ಲಿಂಗಾಯತರಿಗೆ ಡಿಸಿಎಂ ಆಗುವ ಅವಕಾಶ ದೊರೆತಿದೆ. ಆದರೆ ಒಮ್ಮೆಯೂ ಪಂಚಮಸಾಲಿ ಸಮುದಾಯಕ್ಕೆ ಸಿಎಂ, ಡಿಸಿಎಂ ಆಗುವ ಅವಕಾಶ ದೊರೆಯಲಿಲ್ಲ ಎಂಬುದು ಖೇದಕರ ವಿಷಯ” ಎಂದು ಹೇಳಿದರು.
“ಪಂಚಮಸಾಲಿ ಸಮಾಜದಲ್ಲಿ ಶೇ.10ರಷ್ಟಿರುವ ಬೇರೆ ಲಿಂಗಾಯತ ಪಂಗಡದವರು ಬಿಜೆಪಿಯಿಂದ 5 ಜನ ಸಂಸದರಾಗಿದ್ದಾರೆ. ಅಲ್ಲದೇ ಕೇಂದ್ರ ಮಂತ್ರಿಯೂ ಆಗಿದ್ದಾರೆ. ಆದರೆ ಶೇ.80ರಷ್ಟಿರುವ ಪಂಚಮಸಾಲಿ ಸಮಾಜದಿಂದ ಕೇವಲ ಒಬ್ಬರು ಸಂಸದರಿದ್ದಾರೆ. ಕೇವಲ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ ಮಾತ್ರವಲ್ಲದೇ ಧಾರವಾಡ, ಹಾವೇರಿ, ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ಪಂಚಮಸಾಲಿ ಮತಗಳು ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಸ್ಥಾನ ವಹಿಸುತ್ತವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾಹಿತ್ಯಿಕ ಕೃತಿಗಳಲ್ಲಿ ಕೃಷಿ ಮನೋವೃತ್ತಿಯಾಗಿ ಉಲ್ಲೇಖ: ಸಿ ಬಿ ಚಿಲ್ಕರಾಗಿ
“ಪ್ರಾತಿನಿಧ್ಯ ಸಿಗದಿದ್ದರೂ ಬಿಜೆಪಿಗೆ ಮತ ಹಾಕುವುದನ್ನು ಪಂಚಮಸಾಲಿ ಸಮುದಾಯ ಬಿಟ್ಟಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಮಾಜದ ಬೇಸರ ಕೊನೆಗೊಳ್ಳಬೇಕು. ಬಾಗಲಕೋಟೆ ಇಲ್ಲವೇ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಪಂಚಮಸಾಲಿಗರಿಗೆ ಅವಕಾಶ ನೀಡಬೇಕು” ಎಂದು ಸ್ವಾಮೀಜಿ ಒತ್ತಾಯಿಸಿದರು.
ಪಂಚಮಸಾಲಿ ಮುಖಂಡರುಗಳಾದ ಬಿ ಸಿ ಉಮಾಪತಿ, ಜಿ ಪಿ ಪಾಟೀಲ, ಜೋತಿ ಪ್ರಕಾಶ್, ರಾಜಕುಮಾರ್, ಪ್ರಕಾಶ್ ಪಾಟೀಲ್ ಇದ್ದರು.