ಬಿಡುವಿಲ್ಲದೆ ಸುರಿಯುತ್ತಿರುವ ಭಾರೀ ಮಳೆಗೆ ಗ್ರಾಮೀಣ ನಗರ ಪ್ರದೇಶಗಳಲ್ಲಿ ಮನೆಗಳು ಕುಸಿದು ಬಿದ್ದಿದ್ದು, ಬೆಳೆಹಾನಿ ಉಂಟಾಗಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕೆಂದು ದಾವಣಗೆರೆ ಜಿಲ್ಲೆಯ ಹರಿಹರ ಶಾಸಕ ಬಿ ಪಿ ಹರೀಶ್ ಸೂಚನೆ ನೀಡಿದರು.
“ಭಾರೀ ಮಳೆಗೆ ಹಳ್ಳ-ಕೊಳ್ಳ, ಚರಂಡಿಗಳು ತುಂಬಿದ್ದು, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವಂತ ನಾಗರಿಕರು, ರೈತರು ನದಿ ತೀರಕ್ಕೆ ಜನಜಾನುವಾರುಗಳನ್ನು ಬಿಡದಂತೆ ಜಾಗೃತರಾಗಬೇಕು. ಕೆಂಚನಹಳ್ಳಿ, ಮಲೆಬೆನ್ನೂರು, ಎಳೆ ಹೊಳೆ, ಬನ್ನಿಕೋಡು ಭಾನುವಳ್ಳಿ, ರಾಜನಹಳ್ಳಿ, ವಾಸನ, ಉಕ್ಕಡಗಾತ್ರಿ, ಸೇರಿದಂತೆ ಸಾಕಷ್ಟು ಪ್ರದೇಶದಲ್ಲಿ ಮನೆಗಳು ಕುಸಿದು ಬೆಳೆ ಹಾನಿ, ಸಾವು ಸಂಭವಿಸಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ” ಎಂದು ತಿಳಿಸಿದರು.
ಶಾಸಕ ಬಿಪಿ ಹರೀಶ್ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಇಕ್ಕಟ್ಟಿನ ಪ್ರದೇಶಗಳಲ್ಲಿ ತಮ್ಮ ವಾಹನ ಸಿಲುಕಿದ ಕಾರಣ ದ್ವಿಚಕ್ರ ವಾಹನನೊಂದಿಗೆ ಸಂಚರಿಸಿ ಮನೆ ಕುಸಿದ ಹಾಗೂ ಮೃತಪಟ್ಟ ಕುಟುಂಬದ ಮನೆಗಳಿಗೆ ತೆರಳಿ ಸಾಂತ್ವಾನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಒತ್ತು ಕೊಡಬೇಕು
“ಮನೆ ಕಳೆದುಕೊಂಡ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ತಾಲೂಕು, ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಕುಂಬಳೂರಿನಲ್ಲಿ ಕೆಂಚಪ್ಪನವರ ಪುತ್ರಿ ಒಂದು ವರ್ಷದ ಸ್ಫೂರ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ಯೋಜನೆಯಡಿಯಲ್ಲಿ ಪರಿಹಾರ ನೀಡಲಾಗಿದೆ” ಎಂದು ಹೇಳಿದರು.