ಗ್ರಾಮೀಣ ಭಾಗದ ಹಾಸ್ಟೆಲ್‌ಗಳು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರಗಳಾಗಿದ್ದು, ಪ್ರತಿಯೊಬ್ಬರೂ ಇವುಗಳ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಶಾಸಕ ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಬಿಸಿಎಂ ಇಲಾಖೆ ನೂತನ ವಿದ್ಯಾರ್ಥಿನಿಲಯ ಉದ್ಘಾಟಿಸಿ ಮಾತನಾಡಿದರು. “ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಕಾಯಕ ಮನೋಭಾವ ಮೈ ಗೂಡಿಸಿಕೊಳ್ಳಬೇಕಿದೆ. ಅಕ್ಷರ, ಅನ್ನ, ಆಧ್ಯಾತ್ಮಿಕತೆಗಳ ತ್ರಿವಿಧದ ದಾಸೋಹ ಕೇಂದ್ರಗಳು ಹಾಸ್ಟೆಲ್‌ಗಳಾಗಿವೆ. ತಾಲೂಕಿನ ಉದ್ಗಟ್ಟ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವ್ಯವಸ್ಥೆ, ವಿದ್ಯಾರ್ಥಿಗಳ ತೇಜಸ್ಸು ಕಂಡು ಮೂಕವಿಸ್ಮಿತನಾಗಿ ವೃತ್ತಾಂತದ ಹಾಡು ಕೇಳಿಸಿದೆ” ಎಂದು ನಿರ್ದೇಶನ ನೀಡಿದರು.
“80ರ ದಶಕದಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಸರ್ಕಾರಿ ಹಾಸ್ಟೆಲ್ ಸಿಗದಿದ್ದಾಗ, ಬಿಇಒ ಅವರ ಶಿಫಾರಸಿನ ಮೇರೆಗೆ ಹಾಸ್ಟೆಲ್ ಸೌಲಭ್ಯ ಪಡೆದರೂ, ಹಾಸಿಗೆ ವಿತರಣೆ ವಿಳಂಬವಾದ ವೇಳೆ ನಾನು ಗೋಣಿ ಚೀಲವನ್ನು ಹೊದಿಕೆಯಾಗಿಸಿಕೊಂಡಿದ್ದೆ.ಇದೀಗ ಐಷರಾಮಿ ಬದುಕು ಅನುಭವಿಸುತ್ತಿರುವೆ. ಕಡುಬಡತನದಲ್ಲಿ ಜನಿಸಿದ ನಾನು ಶಾಸಕನಾಗಿ ಹಾಸ್ಟೆಲ್‌ನ ಲೋಕಾರ್ಪಣೆ ಮಾಡಿದ್ದು ಸಂತಸ ತಂದಿದೆ” ಎಂದು ಭಾವುಕರಾದರು.
ಮಾಜಿ ಶಾಸಕ ಎಸ್ ವಿ ರಾಮಚಂದ್ರ ಮಾತನಾಡಿ, “ನನ್ನ ಆಡಳಿತಾವಧಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದೆ. ಇದೀಗ ಲೋಕಾರ್ಪಣೆಗೊಂಡಿದೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸಲಿ. ತಾಲೂಕಿಗೆ ಕೀರ್ತಿ ತರಬೇಕು. ನೀರಾವರಿ ಯೋಜನೆಗಳು ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಬೆಂಬಲವಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಮಾಲಿನ್ಯಯುತ ಮನಸ್ಸೇ ಮಸಣ: ಪ್ರಜ್ಞಾ ಮತ್ತೀಹಳ್ಳಿ
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಾನಸ ನಿಂಗಪ್ಪ, ಉಪಾಧ್ಯಕ್ಷ ಅರ್ಜುನ್, ವಿಸ್ತರಣಾಧಿಕಾರಿ ಅಸಬಾನು, ಪ್ರಭಾರಿ ಬಿಇಒ ಸುರೇಶ್ ರೆಡ್ಡಿ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ ಮಹೇಶ್ವರ, ಎಸ್‌ಡಿಎಂಸಿ ಅಧ್ಯಕ್ಷ ಕಲ್ಲೇಶ್, ರೇವಣಸಿದ್ದಪ್ಪ, ಶಿವಣ್ಣ, ರುದ್ರೇಶ್, ಮುಖ್ಯ ಶಿಕ್ಷಕಿ ಶಿವಮ್ಮ, ನಿಲಯ ಮೇಲ್ವಿಚಾರಕ ದೇವೇಂದ್ರಪ್ಪ ಸೇರಿದಂತೆ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.