ಮಣ್ಣು ದಂಧೆಯಿಂದ ವಿದ್ಯುತ್ ಪ್ರಸರಣದ ಬೃಹತ್ ಟವರ್ ನೆಲಕ್ಕುರುಳುವ ಸಾಧ್ಯತೆ ಎದುರಾಗಿದ್ದು, ಸ್ವಲ್ಪವೇ ಮಣ್ಣು ಕುಸಿತ ಸಂಭವಿಸಿದರೂ ಭಾರೀ ಅನಾಹುತ, ಜೀವಹಾನಿಯಾಗುವ ಸಂಭವವಿದೆ. ಇತ್ತೀಚೆಗೆ ಇಂತಹ ಪ್ರಕರಣ ವರದಿಯಾಗಿದ್ದು, ಈಗ ಅಂತಹದೇ ಮತ್ತೊಂದು ಪ್ರಕರಣ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕಂಡು ಬಂದಿದ್ದು, ಇಂತಹ ಅವೈಜ್ಞಾನಿಕ, ಅನಧಿಕೃತ ಮಣ್ಣು ಸಾಗಾಟದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ) ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಕದಸಂಸ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ್ ಪ್ರಕಟಣೆಗೆ ತಿಳಿಸಿದ್ದು, “ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ನದಿ ದಡದ ಪಟ್ಟಾ ಜಮೀನಿನಲ್ಲಿ 70 ಅಡಿಗೂ ಎತ್ತರದ ಹೈಟೆನ್ಷನ್ ಪವರ್ ಲೈನ್ ಟವರ್ ಮೂಲಕ 65,000 ಕೆವಿಯಷ್ಟು ಅಪಾರ ಪ್ರಮಾಣದ ವಿದ್ಯುತ್ ಪ್ರಸರಣವಾಗುತ್ತದೆ. ಮಣ್ಣು ಮಾಫಿಯಾದ ಕಿಡಿಗೇಡಿಗಳು ಟವರ್‌ಗೆ ಕೇವಲ ನಾಲ್ಕೈದು ಅಡಿಗಳ ಅಂತರದಲ್ಲಿ 15 ಅಡಿಗಳಷ್ಟು ಆಳದವರೆಗೆ ಮಣ್ಣು ಅಗೆದು ಗಣಿಗಾರಿಕೆ ನಡೆಸಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
“ಮಣ್ಣು ಸಾಗಾಟ ಮಾಡುವವರು ಟವರ್‌ಗೆ ಕೇವಲ ನಾಲ್ಕೈದು ಅಡಿಗಳ ಅಂತರದಲ್ಲಿ 15 ಅಡಿಗಳಷ್ಟು ಆಳವಾಗಿ ಮಣ್ಣು ಅಗೆದಿರುವುದರಿಂದ ಈ ಭಾಗದ ನದಿ ದಡದ ಮಣ್ಣು ಮೆದುವಾಗಿದ್ದು, ಒಂದೆರಡು ದಿನ ಮಳೆ ಸುರಿದರೂ ನೀರಿನೊಂದಿಗೆ ಮಣ್ಣು ಸವಕಳಿಯಾಗಿ ಟವರ್ ನೆಲಕ್ಕೆ ಉರುಳುವ ಸಾಧ್ಯತೆ ಇದೆ. ಹಾಗೇನಾದರೂ ಟವರ್ ಉರುಳಿ ಬಿದ್ದರೆ ಆ ಪ್ರದೇಶದ ಸುತ್ತಲೂ ಅಪಾರ ಪ್ರಮಾಣದ ಜೀವ, ಆಸ್ತಿ ಹಾನಿಯಾಗುತ್ತದೆ. ದಾವಣಗೆರೆ, ಹಾವೇರಿ ಹಾಗೂ ಇತರೆ ಜಿಲ್ಲೆಗಳಿಗೆ ಹಲವು ದಿನಗಳ ಕಾಲ ವಿದ್ಯುತ್ ಪ್ರಸಾರದಲ್ಲಿ ತಡೆಯುಂಟಾಗುತ್ತದೆ” ಎಂದರು.

“ಟವರ್‌ಗಳ ಮಾಲಿಕತ್ವ ವಹಿಸಿರುವ ಕೆಪಿಟಿಸಿಎಲ್‌ನವರಿಗೆ ಈ ವಿಷಯ ಹೇಳಿದರೆ, ‘ಹೌದು ವಿಷಯ ನಮ್ಮ ಗಮನಕ್ಕಿದೆ, ಜಮೀನಿನ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆʼ ಎನ್ನುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆಯವರು, ‘ಮಣ್ಣು ಗಣಿಗಾರಿಕೆ ಮಾಡಿದ್ದಕ್ಕೆ ನೋಟಿಸ್ ನೀಡಿದ್ದೇವೆ, ರಾಜಧನ ಹಾಗೂ ದಂಡ ವಿಧಿಸಿದ್ದೇವೆ’ ಎಂದು ಸಿದ್ಧ ಉತ್ತರ ನೀಡುತ್ತಾರೆ. ಕೋಟ್ಯಂತರ ಮೌಲ್ಯದ ಮಣ್ಣನ್ನು ಅಕ್ರಮವಾಗಿ ಸಾಗಿಸಿದವರಿಗೆ ನೋಟಿಸ್ ಜಾರಿ ಮಾಡಿ ಜುಜುಬಿ ಮೊತ್ತದ ರಾಜಧನ, ದಂಡ ವಸೂಲಿ ಮಾಡಿದರೆ ಸಾಕೆಂಬ ಅಧಿಕಾರಿಗಳ ಧೋರಣೆ ಖಂಡನೀಯ. ವಿಷಯ ತಿಳಿದು ಅಲ್ಲಲ್ಲಿ ಮುಂದುವರೆದಿರುವ ಅಕ್ರಮ, ಅನಾಹುತ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಮೌನವಹಿಸಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ತೋರಣಗಲ್ಲು ಅಪ್ರಾಪ್ತೆಯ ಅತ್ಯಾಚಾರ ಖಂಡನೆ; ಅರೋಪಿಗಳ ಬಂಧನಕ್ಕೆ ಎಸ್‌ಎಫ್‌ಐ ಒತ್ತಾಯ
“ನದಿ ದಡದ ಜಮೀನುಗಳಲ್ಲಿ ಕೆಂಪು ಮೆದು ಮಣ್ಣು ಹಾಗೂ ಅನ್ಯ ಪ್ರದೇಶದಲ್ಲಿ ಜಮೀನುಗಳಿಂದ ಅಕ್ರಮ ಗ್ರಾವೆಲ್ ಮಣ್ಣು ಸಾಗಣೆಯಿಂದ ತಾಲೂಕಿನ ಭೌಗೋಳಿಕ ಚಿತ್ರವನ್ನು ವಿಕೃತಗೊಳಿಸಲಾಗುತ್ತಿದೆ. ಸಹಸ್ರಾರು ಮರಗಳು ನೆಲಕ್ಕುರುಳಿಸಿದ್ದು, ಇದರಿಂದ ಜೀವ ವೈವಿಧ್ಯಕ್ಕೆ ಧಕ್ಕೆಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಈ ಹಿಂದೆ ಜಿಲ್ಲಾಧಿಕಾರಿ, ಗಣಿ, ಕಂದಾಯ, ಕೃಷಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಂಘಟನೆಯಿದ ಮನವಿ ಸಲ್ಲಿಸಿದ್ದರೂ ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ವಿಷಯದ ಮಾಹಿತಿ ಇದ್ದರೂ ತವರು ಜಿಲ್ಲೆಯಲ್ಲಿನ ಅಕ್ರಮ ತಡೆಯದೆ ಗಣಿ ಇಲಾಖೆ ಸಚಿವರಾಗಿರುವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಮೌನವಹಿಸಿರುವುದೇಕೆ” ಎಂದು ಪ್ರಶ್ನಿಸಿದ್ದಾರೆ.