ಭೂ-ಅಕ್ರಮ ಆರೋಪದ ಹಿನ್ನೆಲೆ ದಾವಣಗೆರೆ ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ಸುನಿತಾ ಅವರನ್ನು ಅಮಾನತು ಮಾಡಿ ಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ.
ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ಅಕ್ರಮವಾಗಿ ಖಾತಾ ಉತಾರ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ ಆರೋಪ ಸುನಿತಾ ಮೇಲಿತ್ತು. ಇವರು ಡೋರ್ ನಂ 1882/81ಎನಲ್ಲಿ ಡಿ ಎಲ್ ರಾಮಚಂದ್ರಪ್ಪ ಎಂಬುವವರ ಹೆಸರಿಗೆ ಮೇಲಾಧಿಕಾರಿಗಳ ಆದೇಶವಿಲ್ಲದ ಹಾಗೂ ಯಾವುದೇ ಅಧಿಕೃತ ಷರಾ ಇಲ್ಲದೇ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದ್ದರು. ಖಾತೆ ಸೇರಿಸಲು ಯಾವುದೇ ಮೂಲ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸದೇ 2022 ಆಗಸ್ಟ್ 11ರಂದು ನಮೂನೆ-3 ನೀಡಿದ್ದರು.
ಸದರಿ ಖಾತಾ ಎಕ್ಸ್‌ಟ್ಯಾಕ್ ಆಧಾರದ ಮೇಲೆ ಸುಧಾ ಬಿ ಹಾಗೂ ಪೂಜಾ ಟಿ ಎಂಬುವವರು ಸಬ್ ರೆಜಿಸ್ಟಾರ್ ಕಚೇರಿಯಲ್ಲಿ 2022ರ ಆಗಸ್ಟ್ 15ರಂದು ದಾನ ಪತ್ರದ ಆಧಾರದ ಮೇಲೆ ನೋಂದಾವಣೆ ಮಾಡಿಸಿಕೊಂಡು, 2022ರ ಅಕ್ಟೋಬರ್ 10ರಂದು ಖಾತಾ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಾರ್ಡ್ ನಂಬರ್-20 ರ ಸಾರ್ವಜನಿಕರು, ಆಯುಕ್ತರಿಗೆ ದೂರು ನೀಡಿದ್ದರು. ಸರ್ವೆ ನಂ. 51ರ ಉದ್ಯಾನ ಜಾಗವನ್ನು ಖಾಸಗಿ ವ್ಯಕ್ತಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸದರಿ ಸ್ವತ್ತನ್ನು ಯಾವುದೇ ಕಾರಣಕ್ಕೂ ಖಾತೆ ಮಾಡಬಾರದೆಂದು ದೂರು ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನೀರಿಗಾಗಿ ವಿದ್ಯಾರ್ಥಿಗಳ ಪರದಾಟ
ಆಯುಕ್ತರು ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಉಪ ಆಯುಕ್ತರು(ಕಂದಾಯ) ಹಾಗೂ ಎಸ್ಟೇಟ್ ಆಫೀಸರ್‌ಗೆ ಆದೇಶಿದ್ದರು. ಇದೀಗ ತನಿಖಾ ವರದಿ ಸಲ್ಲಿಸಿದ್ದು, ʼಮೇಲಾಧಿಕಾರಿ ಆದೇಶ ಇಲ್ಲದೆ, ಸುನೀತಾ ಅವರು ಖಾತೆ ಪುಸ್ತಕದಲ್ಲಿ ಹೆಸರು ಸೇರಿಸಿದ್ದರುʼ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ಕ್ರಮಗೊಂಡಿರುವ ಪಾಲಿಕೆ ಆಯುಕ್ತರು ಅಮಾನತುಗೊಳಿಸಿ ಮುಂದಿನ
ತನಿಖೆಗೆ ಆದೇಶ ನೀಡಿದ್ದಾರೆ.