ದಾವಣಗೆರೆಯಲ್ಲಿ ಜಿಲ್ಲೆ ಚನ್ನಗಿರಿ ತಾಲೂಕಿನ ಜೋಳದಹಾಳ್ ಅಮ್ಮನ ಗುಡ್ಡ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಎರಡು ಸಾಗುವಾನಿ ಮರ(ತೇಗ)ಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಉಪ ಅರಣ್ಯಾಧಿಕಾರಿ ಮತ್ತು ಗಸ್ತು ಅರಣ್ಯ ರಕ್ಷಕರನ್ನು ಅಮಾನತು ಮಾಡಲಾಗಿದೆ.
ಜೋಳದಾಳ್ ಉಪವಲಯ ಅರಣ್ಯಾಧಿಕಾರಿ ಗಿರೀಶ್, ಮಾವಿನಕಟ್ಟೆ, ಶಾಂತಿಸಾಗರ ವಲಯದ ಗಸ್ತು ಅರಣ್ಯ ರಕ್ಷಕರಾದ ರಾಮು ಮತ್ತು ಜಯರಾಂ ಅವರನ್ನು ಅಮಾನತು ಮಾಡಲಾಗಿದೆ.
ಜೋಳದಾಳ್ ಅರಣ್ಯ ವಲಯದ ಅಮ್ಮನ ಗುಡ್ಡ ಪ್ರದೇಶದ ರಸ್ತೆ ಬದಿಯಲ್ಲಿ ಬಿದ್ದಿದ್ದ ಎರಡು ತೇಗದ ಮರಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಭದ್ರಾವತಿ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಜೋಳದಾಳ್ ಹತ್ತಿರದ ಅಮ್ಮನ ಗುಡ್ಡ ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿ, ಇದೇ ವರ್ಷ ಜುಲೈ 7ರಂದು ಭಾರಿ ಗಾಳಿ ಮತ್ತು ಮಳೆಗೆ ರಸ್ತೆ ಬದಿಯಲ್ಲಿನ ಅರಣ್ಯ ಇಲಾಖೆಗೆ ಸೇರಿದ ಎರಡು ಸಾಗುವಾನಿ ಮರಗಳು ಉರುಳಿ ಬಿದ್ದಿದ್ದವು. ಅವುಗಳನ್ನು ಕಡಿತಲೆಗೊಳಿಸಿ ಅರಣ್ಯ ಇಲಾಖೆಯ ದಾಸ್ತಾನಿಗೆ ಸಾಗಿಸಲಾಗಿತ್ತು. ಆದರೆ, ರೈತ ಸಂಘದ ಮುಖಂಡರ ಮಾಹಿತಿಯ ಮೇರೆಗೆ ‘ಉರುಳಿ ಬಿದ್ದ ಈ ಮರಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ’ ಎಂದು ಆರೋಪಿಸಿ ಮೇಲಧಿಕಾರಿಗಳಿಗೆ ದೂರು ನೀಡಿದ್ದರು.
ಆರೋಪದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಅಕ್ರಮ ಮಾರಾಟವಾಗಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಇದೇ ಜೋಳದಾಳ್ ಕಾಡಿನ ಪ್ರದೇಶದೊಳಗೆ ಕಳ್ಳತನದಿಂದ ಕತ್ತರಿಸಿ ಸಾಗಾಟ ಮಾಡಲು ಬಚ್ಚಿಟ್ಟಿದ್ದ 10 ಲಕ್ಷ ಮೌಲ್ಯದ ಸಾಗುವಾನಿ ಮರದ ತುಂಡುಗಳು ಪತ್ತೆಯಾಗಿತ್ತು. ಅಲ್ಲದೆ, ಹಲವು ಈ ರೀತಿಯಲ್ಲಿ ಮರಗಳ್ಳತನ ಪ್ರಕರಣಗಳು ಈ ಅರಣ್ಯವಲಯದ ವ್ಯಾಪ್ತಿಯಲ್ಲಿ ದಾಖಲಾಗಿವೆ.
ಇದನ್ನು ಓದಿದ್ದೀರಾ? ಚನ್ನಪಟ್ಟಣ ಉಪಚುನಾವಣೆ | ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾದ ನಿಖಿಲ್ ಕುಮಾರಸ್ವಾಮಿ
ಆಗಾಗ ಸಂಭವಿಸುತ್ತಿರುವ ಈ ಮರಗಳ್ಳತನ ಪ್ರಕರಣಗಳು ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳ, ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆಯೋ ಬಂದಿಲ್ಲವೋ ಎಂಬುದು ಪ್ರಶ್ನೆಯಾಗಿದೆ ಎಂದು ರೈತ ಮುಖಂಡರು ಮತ್ತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
