ʼದೂಡಾ ಕಚೇರಿʼ ಉದ್ಘಾಟನೆಗೆ ಆಹ್ವಾನ ನೀಡದ ನಗರಸಭೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಹರಿಹರ ಶಾಸಕ ಬಿ ಪಿ ಹರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹರಿಹರ ಪಟ್ಟಣದಲ್ಲಿ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಶಾಖಾ ಕಚೇರಿಯ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿತ್ತು. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ಕಾರ್ಯಕ್ರಮವಿತ್ತು. ಹರಿಹರ ನಗರಸಭೆ ಆಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರು ದೂಡಾ ಕಚೇರಿ ಉದ್ಘಾಟನೆ ಕುರಿತಂತೆ ಸ್ಥಳೀಯ ಶಾಸಕ ಬಿ ಪಿ ಹರೀಶ್‌ಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಹರಿಹರ ನಗರಸಭೆ ಆಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರನ್ನು ಹರಿಹರ ಶಾಸಕ ಬಿ ಪಿ ಹರೀಶ್ ತರಾಟೆಗೆ ತೆಗೆದುಕೊಂಡು ತೀವ್ರ ವಾಗ್ದಾಳಿ ನಡೆಸಿದರು.
ದೂಡಾ ಶಾಖಾ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹರೀಶ್ ಆಗಮಿಸುತ್ತಿದ್ದಂತೆ ಆಯುಕ್ತರು ಕಣ್ಣಿಗೆ ಬಿದ್ದರು. ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದುದರಿಂದ ಮೊದಲೇ ಸಿಟ್ಟಾಗಿದ್ದ ಶಾಸಕ ಬಿಪಿ ಹರೀಶ್, ಏರು ದನಿಯಲ್ಲೇ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಮಾತ್ರವಲ್ಲ, “ಕೇವಲ ಸಾಹುಕಾರರನ್ನು ಮೆಚ್ಚಿಸಲು ಬಂದಿದ್ದೀಯಾ, ಅವರನ್ನು ಮೆಚ್ಚಿಸಿದರೆ ಆಯ್ತಾ? ಪ್ರೋಟೋಕಾಲ್ ಪ್ರಕಾರ ನಡೆಸಬೇಕು ಎಂಬುದು ನೆನಪಿಲ್ಲವೇ? ನಾನೊಬ್ಬ ಕ್ಷೇತ್ರದಲ್ಲಿ ಎಂಎಲ್ಎ ಇರುವುದು ನಿನಗೆ ಗೊತ್ತಿಲ್ಲವೇ? ನನಗೆ ಸರಿಯಾಗಿ ಮಾತನಾಡಿ ಎಂದು ಹೇಳುತ್ತೀಯಾ? ಹೆಚ್ಚು ಮಾತನಾಡಿದರೆ ಸುಮ್ಮನಿರಲ್ಲ. ಏನು ಮುಖ ತೋರಿಸುತ್ತೀಯ ಹೋಗು ಆಚೆ” ಎಂಬಂತಹ ಇತ್ಯಾದಿ ಇತ್ಯಾದಿ ಮಾತುಗಳಿಂದ ಶಾಸಕ ಬಿ ಪಿ ಹರೀಶ್ ನಗರಸಭೆ ಆಯುಕ್ತರ ಮೇಲೆ ಕೆರಳಿದರು.
“ಪ್ರತಿಯೊಂದಕ್ಕೆ ದೂಡಾ ಅಧ್ಯಕ್ಷರು ಫೋನ್ ಮಾಡಿದ್ದಾರೆ. ನೀನ್ ಏನ್ ಮಾಡಿದೆಯಾ? ಸರಿಯಾಗಿ ಮಾತನಾಡು ಎಂದು ನನಗೆ ಹೇಳ್ತೀಯಾ. ಮಾಡುವುದನ್ನು ಮಾಡಿ ಈಗ ಸರಿಯಾಗಿ ಮಾತನಾಡು ಎಂದು ಹೇಳುತ್ತೀಯಾ. ಸರ್ಕಾರಿ ಅಧಿಕಾರಿಗಳು ನೀವು ತಿಳಿದುಕೊಳ್ಳಬೇಕು. ಪ್ರತಿಯೊಂದು ಮಾಹಿತಿ ತಿಳಿಸುವಂತೆ ಈ ಹಿಂದೆಯೇ ಹೇಳಿದ್ದೇನೆ. ಯಾರ ಸೇವೆ ಮಾಡಲು ಬಂದಿದ್ದೀಯಾ. ಸಾಹುಕಾರರ ಸೇವೆ ಮಾಡಲು ಬಂದಿದ್ದೀಯಾ ಏನು? ಏನ್ ಆ ಕಡೆ ನೋಡ್ತೀಯಾ. ಏಯ್ ಹೋಗ್ ಆಕಡೆ ಮುಖ ತೋರಿಸಬೇಡ. ಮತ್ತೆ ಮಾತನಾಡಿದರೆ ಹುಷಾರು. ಗೌರವ ಬೇಡವೇ? ಇಲ್ಲಿ ಜಾಸ್ತಿಯಾಗಿದೆ. ನಾವು ಹೇಳಿದ್ದೇವೆಯಲ್ವಾ? ಎಲ್ಲಿದ್ದಾನೆ, ಎಲ್ಲಿ ಹೋಗಿದ್ದಾನೆ ಅವ್ನು” ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಸ್ಥಳದಲ್ಲಿಯೇ ಇದ್ದ ದೂಡ ಅಧ್ಯಕ್ಷ ದಿನೇಶ್ ಶೆಟ್ಟಿ ಶಾಸಕರನ್ನು ಸಮಾಧಾನ ಪಡಿಸಲು ಯತ್ನಿಸಿ ಕಚೇರಿಯೊಳಗೆ ಕರೆದುಕೊಂಡು ಹೋಗಲು ಯತ್ನಿಸಿದಾಗ, ಈ ವೇಳೆ ನಾವು ನಿಮಗೆ ಏನನ್ನೂ ಹೇಳುತ್ತಿಲ್ಲ. ದೂಡಾ ಅಧ್ಯಕ್ಷರೇ ಕರೆ ಮಾಡಿ ಕಾರ್ಯಕ್ರಮಕ್ಕೆ ಬನ್ನಿ ಎಂಬ ಆಹ್ವಾನ ನೀಡುತ್ತಾರೆ. ಆದರೆ ಪ್ರೋಟೋಕಾಲ್ ಪ್ರಕಾರ ಆಯುಕ್ತರಿಗೆ ಮಾತ್ರ ಶಾಸಕರು ಇರುವುದು ಗೊತ್ತಿಲ್ಲವಾ? ಸಾಹುಕಾರರನ್ನು ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡಿದರೆ ಹೇಗೆ? ಇಲ್ಲಿ ಏನೇನಾಗುತ್ತಿದೆ ಎಂಬುದು ನಿಮಗೆ ಗೊತ್ತಿಲ್ಲ ಎಂದು ಸಿಟ್ಟು ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ರೈತರಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ: ಸಿಪಿಐಎಂ ಪಕ್ಷ ಆರೋಪ
ಆಗಿದ್ದೂ ಆಗಿ ಹೋಯ್ತು. ಬನ್ನಿ ಕಾರ್ಯಕ್ರಮಕ್ಕೆ ಎಂದು ದಿನೇಶ್ ಶೆಟ್ಟಿ ಹೇಳಿದಾಗ ಒಳಗೆ ಹೋದ ಶಾಸಕರು ಮತ್ತೆ ಹೊರಗೆ ಬಂದು ಮತ್ತೊಮ್ಮೆ ಅಸಮಧಾನ ವ್ಯಕ್ತಪಡಿಸಿದ್ದಾರೆ.