ಒತ್ತುವರಿಯಾಗಿರುವ ಕೆರೆ ಮತ್ತು ಸರ್ಕಾರಿ ಗೋಮಾಳದ ಜಾಗವನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನಾಂಗದ ನಿವಾಸಿಗಳಿಗೆ ನಿವೇಶನ ಮತ್ತು ವಸತಿ ರಹಿತರಿಗೆ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ಕಬ್ಬೂರು ಗ್ರಾಮಸ್ಥರು ದಾವಣಗೆರೆ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದಲಿತ ವಾಣಿಜ್ಯ ಮಂಡಳಿ ಸದಸ್ಯ ಮತ್ತು ಮುಖಂಡ ಮಂಜುನಾಥ ಕಬ್ಬೂರು ಮಾತನಾಡಿ, “ಗೋಮಾಳದಲ್ಲಿ ದನಕರುಗಳು, ಕುರಿ ಮೇಕೆಗಳು, ಹಕ್ಕಿ ಪಕ್ಷಿಗಳ ಆಹಾರಕ್ಕಾಗಿ ಆಧಾರವಾಗಿರುತ್ತದೆ. ಮಣ್ಣು ಮಾಫಿಯಾ ದಂಧೆಕೋರರು ಸದರಿ ಗೋಮಾಳ ಹಾಗೂ ಸ್ಮಶಾನದಲ್ಲಿ 8-10 ಅಡಿ ಆಳದವರೆಗೆ ಜೆಸಿಬಿಯಿಂದ ಮಣ್ಣನ್ನು ಅಗೆದು ಟ್ರ್ಯಾಕ್ಟರ್‌ನಿಂದ ಸಾಗಿಸಿ ಮಾರಾಟ ಮಾಡಿದ್ದಾರೆ” ಎಂದರು.
“ಮಣ್ಣು ದಂಧೆ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ದಾಖಲಿಸಿ ಜನವರಿ 13ರ ಸೋಮವಾರದಂದು ತಾಲೂಕು ತಹಶೀಲ್ದಾರರಿಗೆ ಮಣ್ಣು ದಂಧೆಕೋರರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೆ ಕೇವಲ ದಂಧೆಕೋರರ ಮೇಲೆ ಕೆರೆ ಮತ್ತು ಗೋಮಾಳ ಮಣ್ಣು, ಕಳ್ಳತನ ಕೇಸು ದಾಖಲಿಸಿ, ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಂಡು ಸ್ಮಶಾನ ಕಾಮಗಾರಿ ಪ್ರಾರಂಭಿಸಿದ್ದಾರೆ. ಆದರೆ ಗೋಮಾಳದಲ್ಲಿ 1992ರಲ್ಲಿ ಸ್ಮಶಾನ ಮಂಜೂರಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕಾಮಗಾರಿಯ ಮಾಹಿತಿ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“1992ಕ್ಕಿಂತ ಮೊದಲು ಉತ್ತರ ದಿಕ್ಕಿನಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಂಡು ಬಂದಿರುತ್ತಾರೆ. ಆದ್ದರಿಂದ ನಮ್ಮ ಪೂರ್ವಜರ ಅಂತ್ಯಸಂಸ್ಕಾರ ಮಾಡಿದ ಸ್ಥಳವನ್ನೇ ಸ್ಮಶಾನವನ್ನಾಗಿ ಮಾಡಿಕೊಡಬೇಕು. ಸದರಿ ಜಮೀನನ್ನು ರಾಜಕೀಯ ಬೆಂಬಲ ಹೊಂದಿರುವ ಕೆಲವರು ಅಕ್ರಮವಾಗಿ ಜಮೀನು ಒತ್ತುವರಿ ಮಾಡಿ ಅಡಕೆ, ತೆಂಗು ಸೇರಿದಂರೆ ಇತರೆ ಬೆಳೆಗಳನ್ನು ಬೆಳೆದಿರುವ ಸದರಿ ಗೋಮಾಳವನ್ನು ತುರ್ತಾಗಿ ಸರ್ವೆ ಮಾಡಿ, ಹದ್ದು ಬಸ್ತು ಮಾಡಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದೆಹಲಿ ಗಣರಾಜ್ಯೋತ್ಸವಕ್ಕೆ ಕಿನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಆಹ್ವಾನ
“ಕಬ್ಬೂರು ಗ್ರಾಮದಲ್ಲಿ 1992ರ ಗ್ರಾಮದ ಜನಗಣತಿ ಅಂಕಿಅಂಶದ ಪ್ರಕಾರ 500 ಕುಟುಂಬಗಳು, 2500ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಪ್ರಸ್ತುತ ಜನಸಂಖ್ಯೆ ಅದರ ಎರಡರಷ್ಟು ಹೆಚ್ಚಾಗಿದೆ. ಇವರಿಗೆ ನಿವೇಶನ ಮತ್ತು ಮನೆ ಇರುವುದಿಲ್ಲ. ಅದರಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಸೇರಿದಂತೆ ಇತರೆ ಜನಾಂಗದವರೇ ಬಹುಪಾಲು ಇದ್ದಾರೆ. ಸರಿಸುಮಾರು 4500ಕ್ಕಿಂತ ಅಧಿಕ ಜನಸಂಖ್ಯೆ ಪೈಕಿ ನಿವೇಶನ ಮತ್ತು ನಿವೇಶನರಹಿತ ಕುಟುಂಬದವರೇ ಹೆಚ್ಚಿದ್ದಾರೆ. ಆದ್ದರಿಂದ ಈ ಕುಟುಂಬಗಳಿಗೆ ಸದರಿ ಒತ್ತುವರಿಯಾಗಿರುವ ಗೋಮಾಳದ ಜಾಗದಲ್ಲಿ 15 ಎಕರೆ ಜಾಗವನ್ನು ನಿವೇಶನಕ್ಕಾಗಿ ಮಂಜೂರು ಮಾಡಿ ಹಂಚಿಕೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್ ವೈ ಕಬ್ಬೂರು ಚಂದ್ರಪ್ಪ, ಕೋಟ್ಯಪ್ಪ ಎನ್ ಎಂ, ಕೆ ಪಿ ರಾಮಸ್ವಾಮಿ, ಧರ್ಮಣ್ಣ, ಪ್ರಸನ್ನ, ಮಲ್ಲಿಕಾರ್ಜುನ್, ಧನ್ಯಕುಮಾರ, ಗುರುಮೂರ್ತಿ ಕೆ ಎನ್, ರಾಮಸ್ವಾಮಿ ಎಲ್ ಪಿ, ಶಿವಕುಮಾರ್ ಎನ್, ದೇವರಾಜ್, ಎನ್ ಎಂ ಕೋಟಿ ಸೇರಿದಂತೆ ಬಹುತೇಕರಿ ಇದ್ದರು.