ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಹರಿಹರ ನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ಆಸ್ಪತ್ರೆಗೆ ಬರುವ ರೋಗಿಗಳು, ಸಂಬಂಧಿಕರು ಆಸ್ಪತ್ರೆಯ ಆವರಣ ನೋಡಿ ಭಯ ಪಡುವ ಪ್ರಸಂಗ ಎದುರಾಗಿದೆ.
ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣದ ಅಲ್ಲಲ್ಲಿ ಕಸದ ರಾಶಿಯಿಂದ ತುಂಬಿ ತುಳುಕುತ್ತಿದ್ದು, ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಕಾಣದೆ ಸೊರಗುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ, ಪ್ಲಾಸ್ಟಿಕ್ ಪೇಪರ್, ಖಾಲಿಯಾದ ಎಳನೀರು ಬಿರಟೆಗಳು ಕಂಡುಬಂದರೆ, ಇನ್ನೊಂದೆಡೆ ಜಾಲಿಗಿಡಗಳು ಹಬ್ಬುತ್ತಲೇ ಇವೆ. ಅಲ್ಲಲ್ಲಿ ಕುಡುಕರ ಅಡ್ಡೆಯೂ ಕಂಡುಬಂದಿದ್ದು, ಮದ್ಯಪಾನದ ಪ್ಯಾಕೆಟ್‌ಗಳು, ಬಾಟಲಿಗಳು ಕಂಡುಬರುತ್ತವೆ. ಕಸ ತುಂಬಿದ ಚರಂಡಿಗಳು ರೋಗ ಹರಡುವ ನೊಣಸೊಳ್ಳೆಗಳಿಗೆ, ಹಂದಿಗಳಿಗೆ ಆಶ್ರಯ ತಾಣವಾಗಿ ರೋಗದ ಉಗಮ ಸ್ಥಾನವಾಗಿದೆ. ಆಸ್ಪತ್ರೆಯ ಬೆಡ್ ವಾರ್ಡ್‌ಗಳ ಕಿಟಕಿಯಲ್ಲಿ ಗುಟ್ಕಾ ಕಲೆಗಳು ಆಸ್ಪತ್ರೆಯ ಸ್ವಚ್ಛತೆಗೆ ಹಿಡಿದ ಕೈಗನ್ನಡಿಯಂತಿವೆ. ಆಸ್ಪತ್ರೆಯ ಒಳಗೆ ಸ್ವಚ್ಛತೆ ಕಾಪಾಡಿದ್ದರೂ ಹೊರಗೆ ಕಸಿದು ರಾಶಿ ತುಂಬಿ ತುಳುಕುತ್ತಿದೆ.
ಶಿವಮೊಗ್ಗ ರಸ್ತೆಯಿಂದ ಆಸ್ಪತ್ರೆಗೆ ತಿರುಗುವ ರಸ್ತೆಯ ಬದಿಯ ಚರಂಡಿಯು ಸಂಪೂರ್ಣವಾಗಿ ಹಾಳಾಗಿ ಕೊಳಚೆಯು ಹರಿಯುತ್ತಿದ್ದು, ಆ ದುರ್ವಾಸನೆಯೇ ಆಸ್ಪತ್ರೆಗೆ ಬರುವ ರೋಗಿಗಳನ್ನು ಬರಮಾಡಿಕೊಂಡು ಇನ್ನಷ್ಟು ರೋಗಗಳನ್ನು ಹಂಚುತ್ತಿದೆ. ಆಸ್ಪತ್ರೆಯ ಎರಡು ಬದಿಯ ರಸ್ತೆಗಳಲ್ಲಿ ಕಾಣುವ ಬೀದಿ ದೀಪಗಳು ಹಾಳಾಗಿದ್ದು, ಉರಿಯದೆ ಕತ್ತಲಮಯವಾಗಿರುತ್ತದೆ. ರಾತ್ರಿ ರೋಗಿಗಳು, ರೋಗಿಗಳ ಪಾಲಕರು, ವೃದ್ಧರು ನಡೆದಾಡುವುದೇ ಕಷ್ಟವಾಗುತ್ತಿದೆ. ಮಳೆ ಸುರಿದಾಗ ಆಸ್ಪತ್ರೆಯ ಅಂಗಳದಲ್ಲಿ ಅಲ್ಲಲ್ಲಿ ವಾರಗಟ್ಟಲೆ ನೀರು ನಿಂತು ಡೆಂಗ್ಯೂ ಭಯ ಹೆಚ್ಚಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ದೇಶದ ಜನರಿಗೆ ಆರೋಗ್ಯ ಮತ್ತು ಸ್ವಚ್ಛತೆ ಅರಿವು ಮೂಡಿಸಿದ್ದರೂ ಆಸ್ಪತ್ರೆ ಸಿಬ್ಬಂದಿ ಅಧಿಕಾರಿಗಳಿಗೆ ಅದರ ಅರಿವೇ ಇಲ್ಲದಂತಾಗಿದೆ.
ಹರಿಹರದ ಸರ್ಕಾರಿ ಆಸ್ಪತ್ರೆಯ ಅಂಧ ಅಧಿಕಾರಿಗಳು ಮತ್ತು ನಗರಸಭಾ ಅಧಿಕಾರಿಗಳು ಸ್ವಚ್ಛತೆಯ ಬಗ್ಗೆ ಗಮನ ಕೊಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಆರೋಗ್ಯ ಕೊಡುವ ಆಸ್ಪತ್ರೆಗಳು ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು. ಆದರೆ ಇಲ್ಲಿ ಸಂಪೂರ್ಣ ತದ್ವಿರುದ್ಧವಾಗಿದ್ದು, ಕೊಳಚೆಯಾಗಿ ಮಾರ್ಪಟ್ಟಿದೆ.
ಕಾಂಪೌಂಡ್ ಕಾಮಗಾರಿ ಅಪೂರ್ಣವಾಗಿದ್ದು, ಹೊರಗಿನವರ, ಕುಡುಕರ ಹಾವಳಿ ಹೆಚ್ಚಾಗಿದೆಯೆಂದು ಅಲ್ಲಿನ ಅಕ್ಕಪಕ್ಕದ ನಿವಾಸಿಗಳು ಆರೋಪಿಸುತ್ತಾರೆ.
ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆಸ್ಪತ್ರೆಯ ಆವರಣ ತಕ್ಕಮಟ್ಟಿಗೆ ಸ್ವಚ್ಛವಾಗಿದೆ. ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಾರೆ. ಆದರೆ ವಾರ್ಡ್ ಪಕ್ಕದ ಹಾಗೂ ಹೊರ ಆವರಣ ಸ್ವಚ್ಛವಾಗಿಲ್ಲದ ಕಾರಣ ಬಹಳಷ್ಟು ಸೊಳ್ಳೆಗಳು, ನೊಣಗಳು ತುಂಬಿಕೊಂಡು ರಾತ್ರಿ ವೇಳೆ ವಾರ್ಡ್‌ಗಳಲ್ಲಿ ತೊಂದರೆ ಕೊಡುತ್ತವೆ. ಅದರಿಂದಲೇ ಅರ್ಧ ರೋಗ ಬರುವಂತಿದೆ” ಎಂದು ಅಸಮಾಧಾನ ಪಟ್ಟರು.
“ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಕೆಲವು ವಿಭಾಗಗಳಲ್ಲಿ ವೈದ್ಯರ ಕೊರತೆಯೂ ಇದೆ ಎಂದು ದೂರು ಕೇಳಿಬಂದಿದ್ದು, ಅದನ್ನೂ ಕೂಡ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಗೆಹರಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿದ್ದೀರಾ? ಚಿತ್ರದುರ್ಗ | ಹೂಳು ತುಂಬಿರುವ ಚರಂಡಿಗಳು; ಮೂಲ ಸೌಕರ್ಯಗಳ ಮರೀಚಿಕೆ
ಸ್ಥಳೀಯ ವೈದ್ಯಾಧಿಕಾರಿ ಹನುಮಂತ ನಾಯಕ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆಸ್ಪತ್ರೆ ಆವರಣದ ಹೊರಗೆ ಮತ್ತು ಒಳಗೆ ಆಗಾಗ್ಗೆ ಸ್ವಚ್ಛತೆಯನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕಾಗಿದೆ. ಮತ್ತೊಮ್ಮೆ ಆಸ್ಪತ್ರೆ ಆವರಣ ಮತ್ತು ಒಳಭಾಗದಲ್ಲಿ ಸ್ವಚ್ಛತೆಯನ್ನು ತುರ್ತಾಗಿ ಕೈಗೊಳ್ಳುತ್ತೇವೆ. ಆಸ್ಪತ್ರೆಯಲ್ಲಿ ಅನಸ್ತೇಶಿಯ ಮತ್ತು ಕಣ್ಣಿನ ಭಾಗದ ವೈದ್ಯರ ಕೊರತೆ ಇದೆ. ಆ ವಿಭಾಗದ ವೈದ್ಯರು ವರ್ಗಾವಣೆಯಾದ ಬಳಿಕ ಆ ಸ್ಥಾನಕ್ಕೆ ಯಾರೂ ಕೂಡ ನಿಯೋಜನೆಗೊಂಡಿಲ್ಲ. ಈ ಬಗ್ಗೆ ಇಲಾಖೆಗೆ ವರದಿ ಮಾಡಿದ್ದು, ಸಧ್ಯದಲ್ಲೇ ಬರುವ ನಿರೀಕ್ಷೆ ಇದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಉಪಚಾರವನ್ನು ಪೂರೈಸುತ್ತೇವೆ” ಎಂದು ಭರವಸೆ ನೀಡಿದರು.