ದಾವಣಗೆರೆಯ ಬೀಡಿ ಕಾರ್ಮಿಕರ ಬಡಾವಣೆ (ರಾಜ ಕ್ವಾರ್ಟರ್ಸ್)ಯಲ್ಲಿ ಆಶ್ರಯ ಯೋಜನೆ ಸಮಿತಿಯ ಕೆಲವು ಅಧಿಕಾರಿಗಳು ನಿವೇಶನ ಹಂಚಿಕೆ ಕುರಿತು ಪಟ್ಟಿ ತಯಾರಿಸುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಬೀಡಿ ಕಾರ್ಮಿಕರ ಮತ್ತು ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಾಜಾಸಾಬ್ ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.
ಎಂ. ರಾಜಾ ಸಾಬ್ ಮಾತನಾಡಿ, “ದೊಡ್ಡಬೂದಾಳ್ ಗ್ರಾಮದ 45/1.2, 46/2, 47/1ಎ ಹಾಗೂ 47/1ಬಿ ಸರ್ವೇ ನಂಬರ್‌ನ ಒಟ್ಟು 8 ಎಕರೆ 23 ಗುಂಟೆ ಜಮೀನು ನಮ್ಮ ಸಂಘದ ಸದಸ್ಯರ ಹೂಡಿಕೆಯ ಹಣದಿಂದ ಸಂಘದ ಹೆಸರಿನಲ್ಲಿ ಖರೀದಿಸಿದ ಜಾಗ. ಸಂಘದ ಸದಸ್ಯರಿಗೆ ಆರ್‌ಸಿಸಿ ಮನೆ ಮತ್ತು ನಿವೇಶನ ಮಾಡಿ ಹಂಚಿಕೆ ಮಾಡಲು 2005-06 ರಲ್ಲಿ ಸಂಘ ತೀರ್ಮಾನ ಮಾಡಿದ್ದು, ಅದರ ಭಾಗವಾಗಿ ನಮ್ಮ 8 ಎಕರೆ 23 ಗುಂಟೆ ಜಮೀನಿನ ಆಧಾರದ ಮೇಲೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಹಾಗೂ ಇತರೆ ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆಯಬೇಕಾಗಿತ್ತು. ಹಾಗಾಗಿ ನಮ್ಮ ಜಮೀನನ್ನು ದಾವಣಗೆರೆ ತಹಶೀಲ್ದಾರ್ ಹೆಸರಿಗೆ ಮಾಡಿದ್ದೆವು. ಹಾಗಾಗಿ ಸದರಿ ಜಮೀನಿನ ಪಹಣಿ ತಹಶೀಲ್ದಾರ್ ಹೆಸರಿನಲ್ಲಿತ್ತು” ಎಂದು ಹೇಳಿದರು.
“ನಮಗೆ ಸೇರಿದ 8 ಎಕರೆ 23 ಗುಂಟೆ ಜಮೀನಿನಲ್ಲಿ ಆರ್‌ಸಿಸಿ ಮನೆ ನಿರ್ಮಾಣ ಮಾಡುವುದು, ನಿವೇಶನ ವಿನ್ಯಾಸ ಮತ್ತು ಮನೆ ಹಾಗೂ ನಿವೇಶನ ಹಂಚಿಕೆ ಮಾಡುವ ಅಧಿಕಾರ ನಮ್ಮ ಸಂಘಕ್ಕೆ ಸೇರಿದೆ. ನಮ್ಮ ಸಂಘದ ಆಸ್ತಿ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು, ಬಡವರಿಗೆ ಸೇರಬೇಕಾದ ಆಸ್ತಿಯನ್ನು ಕಬಳಿಸಲು ಭೂಗಳ್ಳರು ರಾಜಕೀಯ ಪ್ರಭಾವ ಬಳಸಿ ದಾವಣಗೆರೆ ತಹಶೀಲ್ದಾರ್ ಹೆಸರಿಗೆ ಇದ್ದ ಜಮೀನಿನ ಪಹಣಿಯನ್ನು ಆಶ್ರಯ ಯೋಜನೆ ಸಮಿತಿ ಹೆಸರಿಗೆ ವರ್ಗಾವಣೆ ಮಾಡಿಸಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದ್ದು, ಪ್ರಸ್ತುತದಲ್ಲಿ ನ್ಯಾಯಾಲಯಗಳಲ್ಲಿಯೂ ಪ್ರಕರಣ ನಡೆಯುತ್ತಿದೆ” ಎಂದರು.
“ಭೂಗಳ್ಳರು ಇದರ ಲಾಭ ಪಡೆಯಲು ಖಾಲಿ ನಿವೇಶನ ಮತ್ತು ಕೆಲ ಮನೆಗಳಲ್ಲಿ ಅತಿಕ್ರಮಣ ಮಾಡಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ನಮ್ಮ ಸಂಘ ಹೊರತು ಪಡಿಸಿ ಯಾರೂ ನಮಗೆ ಸೇರಿದ ಜಮೀನಲ್ಲಿ ಕಟ್ಟಡ ಹಾಗೂ ಇತರೆ ಯಾವ ಕಾರ್ಯ ಮಾಡಬಾರದೆಂದು ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿದರೂ, ಅದನ್ನು ತಿರಸ್ಕರಿಸಿ ಭೂಗಳ್ಳರು ಮತ್ತು ಕೆಲ ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ದಾವಣಗೆರೆ ಆಶ್ರಯ ಯೋಜನೆ ಸಮಿತಿಯವರು ಹೊಸ ಪಟ್ಟಿ ಮಾಡಿ ನಿವೇಶನ ಹಂಚಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆನೇಕ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇರುವ ಸಂದರ್ಭದಲ್ಲಿ ಅಧಿಕಾರಿಗಳು ಇದೇ ರೀತಿ ಮುಂದುವರೆದರೆ ಸಂಘಕ್ಕೆ ಆಗುವ ನಷ್ಟಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ” ಎಂದು ಎಚ್ಚರಿಕೆ ನೀಡಿದರು.
“ನಮ್ಮ ಸಂಘ ಈಗಾಗಲೇ ಕೆಲವರಿಗೆ ಆರ್‌ಸಿಸಿ ಮನೆ ಹಂಚಿಕೆ ಮಾಡಿದ್ದೇವೆ. ಕೆಲವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಜಿಲ್ಲಾಧಿಕಾರಿಯವರು ಕೂಡಲೇ ಮಧ್ಯ ಪ್ರವೇಶಿಸಿ ನಮ್ಮ ಸಂಘದ ಸದಸ್ಯರಿಗೆ ನ್ಯಾಯ ಒದಗಿಸಿ ಕೊಡಬೇಕು. ಇಲ್ಲದಿದ್ದಲ್ಲಿ ನಾವು ಕಾನೂನು ಹೋರಾಟಕ್ಕೂ ತಯಾರಿ ಮಾಡಿಕೊಂಡಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಕೃಷಿ ಇಲಾಖೆಯ ಉಪನಿರ್ದೇಶಕಿ
“ಅರಿವು ಇಲ್ಲದಿರುವ ಕೆಲ ಜನರ ಹತ್ತಿರ ಭೂಗಳ್ಳರು ನಿವೇಶನ ನೀಡುತ್ತೇವೆಂದು ಹಣ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. ಈ ರೀತಿ ಜನರಿಗೆ ವಂಚನೆ ಮಾಡುವ ಭೂಗಳ್ಳರ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ದೂರು ನೀಡಿದ್ದೇವೆ. ಪೋಲಿಸ್ ಇಲಾಖೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಟಿ ಅಸ್ಗರ್, ಕೋರ್ಟ್ ಅಕ್ಬರ್, ಖಾಸಿಂ ಸಾಬ್, ಫೈರೋಜ್, ರಿಯಾಜ್, ಇಬ್ರಾಹಿಂ, ಮಹಮ್ಮದ್ ಅಲಿ, ದಾವಣಗೆರೆ ಬೀಡಿ ಕಾರ್ಮಿಕರ ಹಾಗೂ ಅಲ್ಪಸಂಖ್ಯಾತರ ವಿವಿಧೋದ್ದೇಶ ಕಲ್ಯಾಣ ಸಹಕಾರ ಸಂಘದ ಸದಸ್ಯರು ಸೇರಿದಂತೆ ಇತರರು ಇದ್ದರು.