ದೇಶಾದ್ಯಂತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷವು ಇಂಡಿಯಾ ಒಕ್ಕೂಟದ ಭಾಗವಾಗಿ ದೇಶಾದ್ಯಂತ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಲು ಶ್ರಮಿಸುತ್ತಿದೆ ಎಂದು ಸಿಪಿಐ ರಾಜ್ಯ ನಾಯಕ ಡಾ ಸಿದ್ದನಗೌಡ ಪಾಟೀಲ್ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಲಿದೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ಹಾಕಿ ಬೆಂಬಲ ಸೂಚಿಸಬೇಕು” ಎಂದು ಮನವಿ ಮಾಡಿದರು.
“ಈ ದೇಶದಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಚುನಾವಣೆ ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆ ಎನ್ನುವ ಪದ್ಧತಿಯೇ ಇಲ್ಲದಂತಾಗುತ್ತದೆ. ಚುನಾವಣೆ ದೇಶದ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯುತ್ತದೆ. ಒಂದು ವೇಳೆ ದೇಶದಲ್ಲಿ ಚುನಾವಣೆ ಇಲ್ಲ ಎಂದಾದರೆ ನಾವು ಮುಂಬರುವ ದಿನಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಒಂದು ದೇಶ ಒಬ್ಬ ನಾಯಕ ಎನ್ನುವ ಪರಿಸ್ಥಿತಿ ಎದುರಾಗಿ ಹಿಟ್ಲರ್ ಆಡಳಿತ ಬರಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪಾರ್ಲಿಮೆಂಟ್ ಕಾಯುವ ಬದಲು ಕಾರ್ಪೋರೆಟ್ ಕಂಪನಿಗಳನ್ನು ಕಾಯಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ಈ ದೇಶದ ಬಹುತ್ವವನ್ನು ಒಡೆಯುವ ಮೂಲಕ ಏಕವ್ಯಕ್ತಿ ಆಡಳಿತ ಬರಲಿದೆ. ಅಲ್ಲದೆ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಚುನಾವಣೆಯಲ್ಲಿ ಹೇಳಿಕೊಳ್ಳಲು ಯಾವುದೇ ವಿಷಯ ಇಲ್ಲದ ಕಾರಣ ದೇವಸ್ಥಾನದಲ್ಲಿ ಇರಬೇಕಾದ ರಾಮನನ್ನು ಬೀದಿಗೆ ತಂದಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಇರಬೇಕಾದ ಮೋದಿ ದೇವಸ್ಥಾನದಲ್ಲಿ ಕುಳಿತು ಭಜನೆ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
“ರೈತ ವಿರೋಧಿ, ಕೃಷಿ ವಿರೋಧಿ, ಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೆ ತಂದು ದೇಶದ ಕಾರ್ಮಿಕ, ರೈತರ ಬದುಕನ್ನೇ ನಾಶ ಮಾಡುತ್ತಿದ್ದಾರೆ. ಆಡಳಿತ ವಿರೋಧಿ ಅಭಿಪ್ರಾಯಗಳನ್ನು ಪ್ರಸಾರ ಆಗದಂತೆ ತಡೆಯಲು ಮುಂದಾಗಿದ್ದಾರೆ. ಬಿಎಸ್‌ಆರ್‌ಬಿ ಕಾಯಿದೆ ಜಾರಿಗೆ ಬಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಅಪಾಯಕಾರಿ ಹೆಜ್ಜೆ ಇಡುತ್ತಿರುವ ಬಿಜೆಪಿಯನ್ನು ದೂರ ಇಡಲು ಪ್ರಜಾಸತ್ತತೆಯ ಅಳಿವು ಉಳಿವಿನ ಪ್ರಶ್ನೆಯಾಗಿರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿಯನ್ನು ಸೋಲಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆಯ ಗಾಳಿ: ಗೀತಾ ಶಿವರಾಜ್‌ಕುಮಾರ್
ಸುದ್ದಿಗೋಷ್ಟಿಯಲ್ಲಿ ಸಿಪಿಐ ಪಕ್ಷದ ಎಚ್ ಜಿ ಉಮೇಶ್, ಆನಂದ ರಾಜ್, ಅವರಗೆರೆ ಚಂದ್ರು, ವಿ ಲಕ್ಷ್ಮಣ, ಟಿ ಎಸ್ ನಾಗರಾಜ್, ಎಂ ಬಿ ಶಾರದಮ್ಮ ಸೇರಿದಂತೆ ಇತರರು ಇದ್ದರು.
