ಮತದಾನದ ಹಕ್ಕು ಸಂವಿಧಾನ ನೀಡಿರುವ ಅತ್ಯಂತ ಶ್ರೇಷ್ಟವಾದದ್ದು ಮತ್ತು ಪವಿತ್ರವಾದ ಅವಕಾಶ. ಇಂತಹ ಮತವನ್ನು ನೀಡುವ ಮುಂಚೆ ಯಾರಿಗೆ ಮತದಾನ ಮಾಡಬೇಕು ಮತ್ತು ಏತಕ್ಕಾಗಿ ಎಂದು ಚಿಂತಿಸಿ ಮತದಾನ ಮಾಡಬೇಕಾದ ಜವಾಬ್ದಾರಿ ಎಲ್ಲ ನಾಗರಿಕರದ್ದಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ ಬಿ ರಾಮಚಂದ್ರಪ್ಪ ತಿಳಿಸಿದರು.
ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಭಾರತವು ಜಾತ್ಯತೀತವಾದ ರಾಷ್ಟ್ರ. ಇಲ್ಲಿ ಎಲ್ಲ ಧರ್ಮದವರಿಗೆ, ಎಲ್ಲ ಜನವರ್ಗಕ್ಕೆ ಬದುಕುವ ಸಮಾನ ಹಕ್ಕುಗಳಿವೆ. ಇಂದು ಧರ್ಮ, ದೇವರ ಹೆಸರಿನಲ್ಲಿ ಮತವನ್ನು ಕೇಳುವ, ಕೋಮವಾದವನ್ನು ಪ್ರತಿಪಾದಿಸುವ, ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಯಾವುದೇ ಪಕ್ಷವಿದ್ದರೂ ಅದು ಜನವಿರೋಧಿ ಪಕ್ಷವಾಗಿದೆ” ಎಂದರು.
“ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಮಾಡಿದ ಸಾಧನೆ ಎಂದರೆ ಲಾಭದಾಯಕವಾಗಿದ್ದಂತಹ 27 ಬೃಹತ್ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಧರ್ಮವನ್ನು ರಾಜಕಾರಣಕ್ಕೆ ಎಳೆದು ತಂದು ದೇಶದ ಸಾಮರಸ್ಯ-ಭ್ರಾತೃತ್ವಕ್ಕೆ ಧಕ್ಕೆ ತಂದು ಹಾಗೂ ಸಂವಿಧಾನಕ್ಕೆ ಅಪಾಯವನ್ನು ತಂದೊಡ್ಡಲಾಗಿದೆ. ಸಂವಿಧಾನಕ್ಕಿಂತ ಮನು ಸಂಹಿತೆಯನ್ನು, ಪೌರೋಹಿತ್ಯವನ್ನು ಮುನ್ನಲೆಗೆ ತರಲಾಗುತ್ತಿದೆ. ಇಡಬ್ಲ್ಯೂಎಸ್ ಮೀಸಲಾತಿ ಮೂಲಕ ಮೀಸಲಾತಿಯ ಉದ್ದೇಶವನ್ನೇ ನಾಶಗೊಳಿಸಲಾಗಿದೆ” ಎಂದು ಆಕ್ಷೇಪಿಸಿದರು.
“ದೇಶದ ಪ್ರಗತಿಗಿಂತ ಭಾವನೆಗಳನ್ನು ಪ್ರಚೋದಿಸಿ, ದೇಶದ ತುಂಬಾ ಕೋಮು ಕಸವನ್ನು ಚೆಲ್ಲುತ್ತಿರುವ ಕೇಂದ್ರ ಸರ್ಕಾರ ಪ್ರಗತಿ ವಿರೋಧಿಯಾದದ್ದು. ರೈತರ ಸಮಸ್ಯೆ, ಮಹಿಳಾ ಸಮಸ್ಯೆ, ಕಾರ್ಮಿಕರ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೇಶದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ದೇಶದ ಸಂಪತ್ತು ಖಾಸಗಿಯವರ ಪಾಲಾಗುತ್ತಿದೆ. ಆದ್ದರಿಂದ ಸಾಂವಿಧಾನಿಕ ಭಾರತ, ಬಹುತ್ವ ಭಾರತ, ಸಾಮರಸ್ಯ, ಸೌರ್ಹಾದತೆಯ ಭಾರತದ ಉಳುವಿಗಾಗಿ, ಪ್ರಜಾಪ್ರಭುತ್ವದ ಉಳುವಿಗಾಗಿ ಕೋಮುವಾದಿ ಧರ್ಮಾಂಧ ಪಕ್ಷಕ್ಕೆ ಮತ ನೀಡದೆ ಜಾತ್ಯತೀತ ಪಕ್ಷಕ್ಕೆ ಮತ ನೀಡಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಕಾರ್ಯಕರ್ತರ ಸಮಾವೇಶ
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಶಿವಕುಮಾರ್ ಮಾಡಾಲ್, ಅನೀಶ್ ಪಾಶ, ಪವಿತ್ರ, ಆವರಗೆರೆ ಎಚ್ ಜಿ ಉಮೇಶ್, ಸತೀಶ್ ಅರವಿಂದ್ ಸೇರಿದಂತೆ ಇತರರು ಇದ್ದರು.
