ವಕೀಲ ಕಣ್ಣನ್ ಹತ್ಯೆಯನ್ನು ಖಂಡಿಸಿ ದಾವಣಗೆರೆ ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಭೆ ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ನ್ಯಾಯಾಲಯದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ವಕೀಲರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಭೆ ಸೇರಿದ ವಕೀಲರು ಘಟನೆಯನ್ನು ಖಂಡಿಸಿ ಮಾನವ ಸರಪಳಿಯನ್ನು ರಚಿಸಿ, ಆರೋಪಿಗಳಿಗೆ ತೀವ್ರ ಸ್ವರೂಪದ ಶಿಕ್ಷೆಗೆ ಗುರಿಪಡಿಸಲು ಆವರಣದಲ್ಲಿ ಧರಣಿ ನಡೆಸಿ, ಕಣ್ಣನ್ ಎಂಬ ವಕೀಲರ ಕೊಲೆ ಮಾಡಿದ ಪಾತಕಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಒತ್ತಾಯಿಸಿದರು.
“ರಾಜ್ಯದ ಗಡಿಗೆ ಹೊಂದಿಕೊಂಡಿರುವ ಹೊಸೂರಿನಲ್ಲಿ ಹಾಡುಹಗಲೇ ನಡೆದ, ವಕೀಲ ಕಣ್ಣನ್ ಅವರ ಹತ್ಯೆ ಖಂಡನೀಯ. ಈ ಘಟನೆಯಿಂದ ವಕೀಲರಿಗೆ ಯಾವುದೇ ಭದ್ರತೆಯಿಲ್ಲದೆ ವಕೀಲರು ಭಯದಲ್ಲಿ ನ್ಯಾಯಾಲಯಗಳಲ್ಲಿ ಹಾಜರಾಗುವಂತೆ ಹಾಗೂ ಭಯಭೀತರಾಗಿ ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಹೊಸೂರು ನ್ಯಾಯಾಲಯದ ಆವರಣದಲ್ಲಿ ನಡೆಸಲಾದ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಹಾಗೂ ಕೃತ್ಯದಲ್ಲಿ ಭಾಗಿಯಾದವರನ್ನು ಈ ಕೂಡಲೇ ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಈ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ವಕೀಲರಿಗೆ ಸೂಕ್ತ ಭದ್ರತೆ ಒದಗಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ “ಆರೋಗ್ಯಕರ ಸಮಾಜದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ವಕೀಲರ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಘಟನೆ ವಕೀಲರಿಗೆ ರಕ್ಷಣೆ ನೀಡುವಲ್ಲಿ ವೈಫಲ್ಯವನ್ನು ತೋರಿಸುತ್ತದೆ. ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಹುನಗುಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೊಸ ಆ್ಯಂಬುಲೆನ್ಸ್
ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್ ಬಸವರಾಜ್, ಉಪಾಧ್ಯಕ್ಷ ಜಿ ಕೆ ಬಸವರಾಜ್ ಗೋಪನಾಳ್, ಬಸವರಾಜ್ ಎಸ್, ಸಹ ಕಾರ್ಯದರ್ಶಿ ಎ ಎಸ್ ಮಂಜುನಾಥ್, ಬಿ ಅಜ್ಜಯ್ಯ ಆವರಗೆರೆ, ಭಾಗ್ಯಲಕ್ಷ್ಮಿ ಆರ್, ಚೌಡಪ್ಪ, ಮಧುಸೂದನ್ ಟಿ ಹೆಚ್, ನಾಗರಾಜ್ ಎಲ್, ನೀಲಕಂಠಯ್ಯ ಕೆ ಎಂ, ರಾಘವೇಂದ್ರ ಎಂ, ಸಂತೋಷ್ ಕುಮಾರ್ ಜಿ ಜೆ, ಕಾರ್ಯಕಾರಿ ಸಮಿತಿ ಸದಸ್ಯ ವಾಗೀಶ್ ಕಟಗಿಹಳ್ಳಿ ಮಠ, ಹಿರಿಯ ವಕೀಲರುಗಳಾದ ಎ ಸಿ ಜಗದೀಶ್ವರ್, ಎನ್ ಶಿವಲಿಂಗಪ್ಪ, ಬಿ ಎಂ ಹನುಮಂತಪ್ಪ, ಎಲ್ ದಯಾನಂದ್, ಗುಮ್ಮನೂರು ಮಲ್ಲಿಕಾರ್ಜುನ್, ಹೆಚ್ ದಿವಾಕರ್, ಎ ಸಿ ರಾಘವೇಂದ್ರ ಸೇರಿದಂತೆ ವಕೀಲರ ಸಂಘದ ಎಲ್ಲ ಸದಸ್ಯರು, ವಕೀಲರು ಇದ್ದರು.