ದಾವಣಗೆರೆ | ಕಾಮಗಾರಿ ಅರ್ಧಕ್ಕೆ ನಿಂತು ಪಾಳುಬಿದ್ದ ಕಟ್ಟಡದಂತಾದ ಮೌಲಾನ ಆಝಾದ್ ಶಾಲೆ: ಗಮನಿಸುವರೇ ಸಚಿವ ಜಮೀರ್?

Date:

Advertisements

ಈ ಕಟ್ಟಡವನ್ನು ನೋಡಿದರೆ ನೀವು ಯಾವುದೋ ಪಾಳುಬಿದ್ದ ಹಳೆಯ ಕಟ್ಟಡ ಅಂತ ಅಂದುಕೊಳ್ಳಬಹುದು. ಸಿಮೆಂಟ್ ಮಿಶ್ರಿತ ಮಣ್ಣಿನ ನೆಲ, ಅಸ್ಥಿಪಂಜರದಂತೆ ಕಾಣುವ ಇಟ್ಟಿಗೆಗಳು, ಮುಚ್ಚಲು ಬಾಗಿಲುಗಳೇ ಇಲ್ಲದ, ಗಾಳಿಗೆ ಮಯ್ಯೊಡ್ಡಿಕೊಂಡಿರುವ ಕಿಟಕಿ, ಕೊಠಡಿಗಳು. ಆದರೂ ಇಲ್ಲಿ ಶಾಲಾ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳು ಪಾಠ ಕೇಳುತ್ತಾರೆ. ಇದು ಸರ್ಕಾರಿ ಶಾಲೆ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಇದು ಸತ್ಯ.‌

ದಾವಣಗೆರೆ  ನಗರದ ಮಧ್ಯ ಭಾಗದಲ್ಲಿರುವ ಬೀಡಿ ಲೇಔಟ್ ಮತ್ತು ಮಿರ್ಜಾ ಇಸ್ಮಾಯಿಲ್ ನಗರದ ಮೌಲಾನ ಆಝಾದ್ ಸರ್ಕಾರಿ ಆಂಗ್ಲ ಮಾಧ್ಯಮದ ಪಾಠ ಶಾಲೆ ಎಂದರೆ ನೀವು ನಂಬಲೇಬೇಕು. ಈ ಶಾಲೆಯಲ್ಲಿ ಸುಮಾರು 290ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇದೇ ಕಟ್ಟಡದಲ್ಲಿಯೇ ಪಾಠ  ಕೇಳುತ್ತಾರೆ.

WhatsApp Image 2024 08 26 at 2.00.41 PM

ದಾವಣಗೆರೆ ನಗರದಲ್ಲಿ ಕಾರ್ಮಿಕರ, ಬಡವರ್ಗದ, ಮಧ್ಯಮ ವರ್ಗದ ಮಕ್ಕಳು ಓದುವ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆ.  ಇಲ್ಲಿ ಸುಮಾರು ಮುನ್ನೂರು ವಿದ್ಯಾರ್ಥಿಗಳಿದ್ದಾರೆ. ಕೊಠಡಿಗಳ ಅಭಾವದ ಕಾರಣಗಳಿಂದ 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ ಈ ಶಾಲೆಗೆ ಸುಮಾರು ಎರಡು ಕೋಟಿ ಅನುದಾನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರೆತಿದ್ದು, ಗುತ್ತಿಗೆದಾರರು ಅಲ್ಲಿಂದ ಶೇಕಡ 50 ರಿಂದ 60ರಷ್ಟು ಕಾಮಗಾರಿ ಮುಗಿಸಿದ್ದಾರೆ. ಈ ಶಾಲಾ ಕಟ್ಟಡದ ಕಾಮಗಾರಿ ಒಂದೂವರೆ ವರ್ಷದಿಂದ ಕಾಮಗಾರಿ ನಿಂತಿದ್ದು, ಕಟ್ಟಡ ಪೂರ್ಣಗೊಳ್ಳದೆ ಶಾಲಾ ಮಕ್ಕಳು ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ.

Advertisements

ಇದಕ್ಕೆ ನೇರ ಕಾರಣ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಎಂದರೆ ತಪ್ಪಲ್ಲ. ಎರಡು ಕೋಟಿ ಅನುದಾನದಲ್ಲಿ ಪ್ರಾರಂಭವಾದ ಕಟ್ಟಡ, ಒಂದು ಒಂದೂವರೆ ವರ್ಷಗಳ ತನಕ ಯಾವುದೇ ಅಡೆತಡೆ ಇಲ್ಲದೆ ಕಾಮಗಾರಿ ಸಾಗಿತ್ತು. ಈ ಮಧ್ಯೆ ಆರ್‌ಟಿಐ ಕಾರ್ಯಕರ್ತರೊಬ್ಬರು ಈ  ಕಾಮಗಾರಿ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಕಾರಣದಿಂದ ಈ ಶಾಲಾ ಕಾಮಗಾರಿ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ನಿಜವಾದ ಸಮಸ್ಯೆಗೊಳಗಾದವರು  ವಿದ್ಯಾರ್ಥಿಗಳಾಗಿದ್ದು ಅವರಿಗೆ ಪಾಠ ಕೇಳಲು ವಿದ್ಯಾರ್ಥಿ ಕೊಠಡಿಗಳಿಲ್ಲದೇ ಪರಿತಪಿಸುವಂತಾಗಿದೆ.

WhatsApp Image 2024 08 26 at 2.00.42 PM

ಈ ನಡುವೆ ಈ ಬಾರಿಯಿಂದ ಪದವಿ ಪೂರ್ವ ತರಗತಿಗೆ ಅನುಮೋದನೆ ದೊರೆತಿದ್ದು, ಪ್ರಥಮ ಪಿಯು ವಿಜ್ಞಾನ ತರಗತಿ ಕೂಡ ಪ್ರಾರಂಭವಾಗಿದೆ.‌ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಕಷ್ಟು ಕೊಠಡಿಗಳಿಲ್ಲದೆ, ಈ ಅರ್ಧಂಬರ್ಧ ಪೂರ್ಣಗೊಂಡಿರುವ ಕಟ್ಟಡದ ಕೊಠಡಿಗಳಲ್ಲಿ ಪಾಠ ಪ್ರವಚನಗಳನ್ನು ಕೇಳುತ್ತಿದ್ದಾರೆ. ಶಾಲೆಗೆ ಹೊಂದಿಕೊಂಡಿರುವ ಪಕ್ಕದ ಬಡಾವಣೆಯ ಶಬ್ದ ಮಾಲಿನ್ಯ, ವಾಯುಮಾಲಿನ್ಯ, ಕಿಟಕಿಗಳಿಂದ ನೇರವಾಗಿ ಬೀಸುವ ಗಾಳಿ, ನೆಲದಿಂದ ಮೇಲೆ ಎದ್ದೇಳುವ ಧೂಳು, ಕಿಟಕಿಗಳು ಮತ್ತು ಬಾಗಿಲುಗಳಿಲ್ಲದ ಕೊಠಡಿಗಳ ಮಧ್ಯೆಯೇ ಪಾಠ ಕೇಳುವ ದುಸ್ಥಿತಿ ಮುಂದುವರೆದಿದೆ.

ಲೋಕಾಯುಕ್ತಕ್ಕೆ ದೂರು ನೀಡಿದಂದಿನಿಂದ ಅರ್ಧಂಬರ್ಧಕ್ಕೆ  ಕಾಮಗಾರಿಯನ್ನು ನಿಲ್ಲಿಸಲಾಗಿದ್ದು, ಅಲ್ಪಸಂಖ್ಯಾತ  ಇಲಾಖೆಯ ನಿರ್ದೇಶಕರು, ಸಹಾಯಕ ನಿರ್ದೇಶಕರು, ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ಯಾರು ಕೂಡ ಇದರ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳೀಯರು ನೀಡಿರುವ ಪ್ರಕಾರ ಅಕ್ರಮ ನಡೆದಿದೆ ಎಂದು ದೂರು ನೀಡಿರುವ ಕಾರ್ಯಕರ್ತರ ದೂರಿಗೆ ಸಂಬಂಧಿಸಿದಂತೆ, ಲೋಕಾಯುಕ್ತ ಇಲಾಖೆಯು ಕಟ್ಟಡ ಕಾಮಗಾರಿ ನಿಲ್ಲಿಸಿ ಎಂದು ಆದೇಶ ನೀಡಿಲ್ಲ. ಆದರೂ ಕಾಮಗಾರಿ ನಿಲ್ಲಿಸಲಾಗಿದೆ. ಈ ಬಗ್ಗೆ ಸಮರ್ಪಕ ಲೆಕ್ಕಪತ್ರಗಳನ್ನು ಸಲ್ಲಿಸಿ ಸಮಜಾಯಿಷಿ ನೀಡಿ ಶಾಲಾ ಕಾಮಗಾರಿ ಪೂರ್ಣಗೊಳಿಸಬೇಕಾಗಿದ್ದ ಇಲಾಖೆ ಇದರ ಬಗ್ಗೆ ಗಮನಹರಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ.

WhatsApp Image 2024 08 26 at 1.55.44 PM

ಈ ಬಗ್ಗೆ ಈ ದಿನ. ಕಾಮ್ ಶಾಲೆಗೆ ಭೇಟಿ ನೀಡಿದಾಗ ನೆಲದಲ್ಲಿನ ಧೂಳಿನ ನಡುವೆಯೇ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುತ್ತಿರುವ ದೃಶ್ಯ ಕಂಡು ಬಂತು. ಅಲ್ಲದೆ ಸುತ್ತ ಕಾಂಪೌಂಡ್‌ನಲ್ಲಿ ಮುಖ್ಯದ್ವಾರಕ್ಕೆ ಗೇಟ್ ಕೂಡ ಇಲ್ಲ. ಯಾವುದೇ ಸುರಕ್ಷತೆ ಇಲ್ಲದಿರುವುದರುಂದ ಶಾಲಾ ಅವಧಿಯ ನಂತರ ಪಾಳುಬಿದ್ದಂತೆ ಇರುವ ಕಟ್ಟಡಕ್ಕೆ ಸಾರ್ವಜನಿಕರು ಬಂದು ಹೋಗುವುದು ಹಾಗೂ ಗುಟ್ಕಾ ಸಿಗರೇಟ್‌ ಎಳೆಯಲು ದೊರಕಿರುವ ಸ್ಥಳದಂತೆ ಮಾರ್ಪಾಟಾಗಿದೆ. ಇದಕ್ಕೆಲ್ಲ ಅಪೂರ್ಣ ಕಟ್ಟಡದೊಳಗೆ ಬಿದ್ದಿರುವ ಗುಟ್ಕಾ ಕವರ್‌ಗಳು ಮತ್ತು ಸಿಗರೇಟ್‌ನ  ತುಂಡುಗಳು ಸಾಕ್ಷಿಯಾಗಿದ್ದವು. ಮಕ್ಕಳು ಕೂಡ ಅವುಗಳನ್ನು ಪ್ರತಿನಿತ್ಯ ನೋಡಿ ದಾರಿ ತಪ್ಪುವ ಆತಂಕ ಪಾಲಕರಿಗೆ ಎದುರಾಗಿದೆ. ಆದರೂ ಕೂಡ ಯಾವುದೇ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದೇ ವಿಪರ್ಯಾಸ.

ಅಲ್ಪಸಂಖ್ಯಾತ ಇಲಾಖೆ ಕೂಡ ಕಟ್ಟಡ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು ನಿರ್ಮಿತಿ ಕೇಂದ್ರ ಕೂಡ ನಿಂತಿರುವ ಕಟ್ಟಡದ ಕಾಮಗಾರಿಯನ್ನು ಮುಂದುವರಿಸಲು ಆಸಕ್ತಿ ವಹಿಸಿಲ್ಲ. ಸದ್ಯ ಈ ಶಾಲೆಯ ಕಟ್ಟಡದಲ್ಲಿ ವಿಜ್ಞಾನ ವಿಭಾಗದ ಮೊದಲನೇ ಪಿಯುಸಿ ತರಬೇತಿ ಕೂಡ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಕೊಠಡಿಗಳಿಲ್ಲದೆ ಮತ್ತು ವಿಜ್ಞಾನ ವಿಭಾಗಕ್ಕೆ ಬೇಕಾದ ಲ್ಯಾಬ್ ಇನ್ನಿತರ ಪರಿಕರಗಳನ್ನು ಕೂಡ ಇಡಲು ಕೊಠಡಿಗಳು ಇಲ್ಲದಾಗಿದೆ. ಈ ಸ್ಥಿತಿಯಲ್ಲಿ ವಿಜ್ಞಾನ ವಿದ್ಯಾರ್ಥಿಗಳ ವಿಜ್ಞಾನದ ಪ್ರಯೋಗಗಳನ್ನು, ತರಬೇತಿಯನ್ನು ಪಡೆಯಲು ಪ್ರಯೋಗಾಲಯಗಳು ಇಲ್ಲದಿರುವುದು ಅವರ ಕಲಿಕಾ ಮಟ್ಟವನ್ನು ಕುಸಿಯುವಂತೆ ಮಾಡಲಿದೆ. ಇದರ ಬಗ್ಗೆ ಕೂಡ ಯಾವುದೇ ಅಧಿಕಾರಿಗಳು ಗಮನಹರಿಸಿಲ್ಲ.

WhatsApp Image 2024 08 26 at 1.55.45 PM 1

ಶಾಲೆಯ ಪರಿಸ್ಥಿತಿಯ ಬಗ್ಗೆ ಈ ದಿನ.ಕಾಮ್ನೊಂದಿಗೆ ಮಾತನಾಡಿದ ಸ್ಥಳೀಯ ಮುಖಂಡ ಆದಿಲ್ ಖಾನ್, “ಈ ಶಾಲೆಯ ಬಗ್ಗೆ ಸತತವಾಗಿ ಒಂದು ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದು, ಸಮರ್ಪಕ ಮೂಲ ಸೌಕರ್ಯಗಳಿಲ್ಲದೆ ಮಕ್ಕಳು ಪಡೆಯುವ ಶಿಕ್ಷಣ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶೀಘ್ರವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರು ಇದರ ಬಗ್ಗೆ ಗಮನ ಹರಿಸಬೇಕು” ಎಂದು ಒತ್ತಾಯಿಸಿದರು.

ಇದನ್ನು ಓದಿದ್ದೀರಾ? ಕಲಬುರಗಿ | ಇಬ್ಬರು ಶಾಸಕರಿದ್ದರೂ ದುರಸ್ತಿ ಕಾಣದ ಹಾಗರಗಾ ಮುಖ್ಯ ಹೆದ್ದಾರಿ; ಸ್ಥಳೀಯರಿಂದ ಹಿಡಿಶಾಪ

ಸಾಮಾಜಿಕ ಕಾರ್ಯಕರ್ತ, ಸ್ಥಳೀಯ ಮುಖಂಡ ಸಾಜಿದ್ ಮಾತನಾಡಿ, “ಮೌಲಾನಾ ಆಝಾದ್ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲಿನ ಬಡವರ, ದಿನಗೂಲಿ ಕಾರ್ಮಿಕರ ಮಕ್ಕಳಿಗೆ ವರದಾನವಾಗಿದೆ. ಶಾಲೆಯ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಬಡ ಮಕ್ಕಳ ಶಿಕ್ಷಣದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಅಧಿಕಾರಿಗಳು ಮಕ್ಕಳ ಶಿಕ್ಷಣಕ್ಕೆ ಸುವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಝಾಕಿರ್ ಮಾತನಾಡಿ, “ಈ ಬಾರಿ ಪಿಯುಸಿ ತರಗತಿ ಕೂಡ ಪ್ರಾರಂಭವಾಗಿದೆ. ಇಲ್ಲಿ ಮೂಲ ಸಮಸ್ಯೆ ಕೊಠಡಿಗಳದ್ದು. ಅರ್ಧಂಬರ್ಧ ಕಟ್ಟಡದ ನೆಲದ ಧೂಳಿನಿಂದ ಮಕ್ಕಳ ಬಿಳಿ ಬಟ್ಟೆಗಳು ಪ್ರತಿದಿನ ಕೊಳೆಯಾಗುವುದರಿಂದ ಪೋಷಕರು ಇದು ಹಳ್ಳಿಗಾಡಿನಲ್ಲಿ ನಡೆಯುವ ಮರದ ಕೆಳಗೆ ಕುಳಿತುಕೊಳ್ಳುವ ಶಾಲೆಯೋ ಅಥವಾ ಕಟ್ಟಡದ ಶಾಲೆಯೋ ಎಂದು ಕೇಳುವಂತಾಗಿದೆ. ಈ ಕಟ್ಟಡದ ಲೆಕ್ಕಪತ್ರಗಳು ಯಾರಿಗೂ ತಿಳಿದಿಲ್ಲ, ಯಾವುದೇ ಅಧಿಕಾರಿಗಳು ಏನಾಗಿದೆ ಎಂದು ತಿಳಿಸುತ್ತಿಲ್ಲ. ಕಟ್ಟಡದ ಕಾಮಗಾರಿ ಮಾತ್ರ ನಿಂತಿದ್ದು, ಸಮಸ್ಯೆಯನ್ನು ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಕಟ್ಟಡ ಕಾಮಗಾರಿಯನ್ನು ಮುಗಿಸಿ ಮಕ್ಕಳ ಶಿಕ್ಷಣಕ್ಕೆ ಸುವ್ಯವಸ್ಥೆ ಮಾಡಿಕೊಡಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ” ಎಂದರು.

WhatsApp Image 2024 08 26 at 2.00.43 PM

ಈ ಬಗ್ಗೆ ಈ ದಿನ.ಕಾಮ್ ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಮಲ್ಲಿಕಾರ್ಜುನ್ ಮಠದ್ ಅವರನ್ನು ಸಂಪರ್ಕಿಸಿದಾಗ, “ಈ ಕಟ್ಟಡದ ಸಂಬಂಧ ಲೋಕಾಯುಕ್ತದಲ್ಲಿ ಕೇಸ್ ಒಂದು ದಾಖಲಾಗಿದ್ದು, ಆ ಕಾರಣದಿಂದ ಕಟ್ಟಡದ ಕಾಮಗಾರಿ ನಿಂತು ಹೋಗಿದೆ. ಅಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಇದು ಬೆಂಗಳೂರಿನ ಅಲ್ಪಸಂಖ್ಯಾತ ಇಲಾಖೆಯ ಕಛೇರಿಯ ಅಡಿಯಲ್ಲಿ ಬರುವುದರಿಂದ ಅಲ್ಲಿನ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು ಕಟ್ಟಡ ಕಾಮಗಾರಿ ಪುನರಾರಂಭಕ್ಕೆ ಕ್ರಮವಹಿಸಲು ಮನವಿ ಮಾಡಲಾಗಿದೆ” ಎಂದು ತಿಳಿಸಿದರು.

ಒಟ್ಟಿನಲ್ಲಿ ಸರ್ಕಾರ ಅಲ್ಪಸಂಖ್ಯಾತ ಇಲಾಖೆಯ ಮೂಲಕ ಮಕ್ಕಳ ಶಿಕ್ಷಣದ ಮೂಲಸೌಕರ್ಯ ಅಭಿವೃದ್ದಿಗೆ ನೀಡಿರುವ ಅನುದಾನ ಬಳಕೆಯಾಗದೆ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಮಕ್ಕಳ ಕಲಿಕೆಗೆ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಮಕ್ಕಳ ಶಿಕ್ಷಣಕ್ಕೆ ಸುವ್ಯವಸ್ಥೆ ಕಲ್ಪಿಸಿಕೊಡುವ ಅವಶ್ಯಕತೆ ಇದೆ. ಶೀಘ್ರವೇ ಅರ್ಧಕ್ಕೆ ನಿಂತಿರುವ ಶಾಲೆಯ ಕಾಮಗಾರಿ ಪುನರಾರಂಭಿಸಲಿ ಎಂಬುದು ಮಕ್ಕಳ ಪೋಷಕರು ಮತ್ತು ಈ ದಿನ.ಕಾಮ್‌ನ ಆಶಯವಾಗಿದೆ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X