ಕಳ್ಳತನ, ದರೋಡೆ ಮತ್ತು ಪಿಕ್ ಪಾಕೆಟ್‌ನಂತಹ ಪ್ರಕರಣಗಳು ಸಾಮಾನ್ಯವಾಗಿ ನಾವು ಕೇಳುವುದುಂಟು. ಅದರಲ್ಲೂ ಕೆಲವು ಕಳ್ಳರು, ದರೋಡೆಕೋರರು ದೇವರುಗಳ, ದೇವಸ್ಥಾನದ, ಮಸೀದಿ ಮಂದಿರಗಳ ಹಣದ ಪೆಟ್ಟಿಗೆ, ಹಣದ ಬಂಡಾರ ಆಭರಣಗಳನ್ನು ಕದ್ದೊಯ್ಯುವ ಪ್ರಕರಣಗಳು ವರದಿಯಾಗುತ್ತದೆ. ಆದರೆ, ಈ ಒಂದು ಪ್ರಕರಣದಲ್ಲಿ ಪೂಜೆ ಮಾಡಲು ಇಟ್ಟಿದ್ದ ದೇವರ ಮೂರ್ತಿಯನ್ನೇ ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ಹಿಂದೂ-ಮುಸ್ಲಿಮರಿಬ್ಬರೂ ಭಾವೈಕ್ಯತೆಯಿಂದ ಜೊತೆಗೂಡಿ ಆಚರಿಸುವ ಮೊಹರಂ ಹಬ್ಬದ ಸಂದರ್ಭದಲ್ಲಿ ಪೂಜೆಗೆ ಇಡಲಾಗುವ ಪೀರಾ ದೇವರ ಮೂರ್ತಿಯನ್ನೇ ಕದ್ದೊಯ್ದಿರುವ ಬಗ್ಗೆ ವರದಿಯಾಗಿದೆ. ದಾವಣಗೆರೆ ನಗರದ ಸಮೀಪದ ಹಳೇ ಕುಂದವಾಡ ಗ್ರಾಮದಲ್ಲಿ ಈ ಬೆಳವಣಿಗೆ ನಡೆದಿದೆ.
ಕುಂದವಾಡ ಗ್ರಾಮದ ಗ್ರಾಮಸ್ಥರು ಬಹಳ ಹಿಂದಿನಿಂದಲೂ ಮೊಹರಂ ಹಬ್ಬವನ್ನು ಭಾವೈಕ್ಯತೆಯಂತೆ ಆಚರಣೆ ಮಾಡುತ್ತಿದ್ದಾರೆ. ಈ ಬಾರಿ ಕೂಡ ವಿಶೇಷವಾಗಿ ಆಚರಣೆಗೆ ಗ್ರಾಮಸ್ಥರು ಸಜ್ಜಾಗಿದ್ದರು. ಆದರೆ, ಇದೀಗ ಹಬ್ಬಕ್ಕೆ ಒಂದು ವಾರ ಬಾಕಿ ಉಳಿದಿದ್ದು, ಯಾರೋ ಕಿಡಿಗೇಡಿಗಳು ಪೆಟ್ಟಿಗೆ ಒಡೆದು ದೇವರನ್ನೇ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.
ವರ್ಷಕ್ಕೆ ಒಂದು ಬಾರಿ ಮೊಹರಂ ಹಬ್ಬದ ಸಂದರ್ಭದಲ್ಲಿ ಪೀರಾ ದೇವರನ್ನು ಹೊರ ತೆಗೆದು ಐದು ದಿನಗಳ ಕಾಲ ಗ್ರಾಮದ ರಾಜಬೀದಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷವಾಗಿ ಹಬ್ಬವನ್ನು ಆಚರಣೆ ಮಾಡುವುದು ಇಲ್ಲಿನ ಪದ್ಧತಿ. ಆದರೆ ಇದೀಗ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಪೆಟ್ಟಿಗೆಯಲ್ಲಿ ಇದ್ದಂತಹ ಮೊಹರಂ ಹಬ್ಬದ ಅಲಿ, ಪೀರಾ ದೇವರ ಮೂರ್ತಿಯನ್ನೇ ಯಾರೋ ಖದೀಮರು ಕದ್ದೊಯ್ದಿದ್ದಾರೆ.
ಪೆಟ್ಟಿಗೆಯಲ್ಲಿದ್ದ ಐದು ದೇವರ ಮೂರ್ತಿಯ ಪೈಕಿ ಎರಡು ದೇವರ ಮೂರ್ತಿಯನ್ನು ಮಾತ್ರ ಖದೀಮರು ಕದ್ದೊಯ್ದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ದೇವರ ಪತ್ತೆ ಮಾಡಲು ಹುಡುಕಾಟ ಆರಂಭಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ನೊಂದಿಗೆ ಮಾತನಾಡಿದ ದಸಂಸದ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ, “ಬಹಳ ಹಿಂದಿನಿಂದಲೂ ಸಾಮರಸ್ಯದಿಂದ ಊರಿನ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಮೊಹರಂ ಹಬ್ಬವನ್ನು ಆಚರಿಸುತ್ತಾ ಬಂದಿದ್ದೆವು. ಆದರೆ ಈಗ ದೇವರನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಮ್ಮೆಲ್ಲರಿಗೂ ಆಶ್ಚರ್ಯ ಮತ್ತು ದಿಗ್ಭ್ರಾಂತಿಯನ್ನು ಉಂಟು ಮಾಡಿದೆ. ಮೊಹರಂ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ದೇವರ ವಿಗ್ರಹವನ್ನು ಪತ್ತೆ ಮಾಡಿ ಊರಿನಲ್ಲಿ ಮೊಹರಂ ಹಬ್ಬ ಮತ್ತೆ ಹಿಂದಿನಂತೆ ಎಲ್ಲರ ಸಾಮರಸ್ಯ ಮತ್ತು ಸಹಬಾಳ್ವೆಯಿಂದ ನಡೆಸಿಕೊಂಡು ಹೋಗಲು ಕ್ರಮ ಕೈಗೊಳ್ಳಬೇಕಾಗಿದೆ” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಪ್ರತಿಕ್ರಿಯಿಸಿದ ಹಳೆ ಕುಂದವಾಡದ ಮೊಹರಂ ಆಚರಣೆ ಸಮಿತಿಯ ಮುಖಂಡ ನಬಿ, “ಕಳೆದ ಮಂಗಳವಾರ ಅಲಿ ಮತ್ತು ಪೀರಾ ದೇವರುಗಳು ಕಳವಾಗಿರುವ ಸಂಶಯವಿದೆ. ಐದು ದೇವರ ಮೂರ್ತಿಗಳನ್ನು ಒಟ್ಟಿಗೆ ಇಟ್ಟಿದ್ದು, ಅದರಲ್ಲಿ ಮುಖ್ಯವಾದ ಅಲಿ ಮತ್ತು ಪೀರಾ ದೇವರ ಮೂರ್ತಿ ಕಳವಾಗಿವೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವ್ಯಕ್ತಿಯೊಬ್ಬರ ಮೇಲೆ ನಮಗೆ ಅನುಮಾನವಿದ್ದು, ಅವರ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದೆ. ಆದರೆ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಲಿಂಗಸುಗೂರು | ಭಕ್ತರ ವೇಷದಲ್ಲಿ ಬಂದು ಮಠದಿಂದ ₹40 ಲಕ್ಷ ಮೌಲ್ಯದ ಸೊತ್ತು ದರೋಡೆಗೈದ ಕಳ್ಳರು!
“ಈ ಬಗ್ಗೆ ಕೇಳಿದರೆ ಬೆರಳಚ್ಚು, ಇತರ ಅಧಿಕಾರಿಗಳು ಎಫ್‌ಎಸ್‌ಎಲ್‌ನಿಂದ ಬರಬೇಕಾಗಿದೆ. ಬರಲು ಒಂದು ವಾರ ಹಿಡಿಯುತ್ತದೆ ಎನ್ನುತ್ತಿದ್ದಾರೆ. ಆದರೆ ಇನ್ನು ಕೆಲವೇ ಆರೇಳು ದಿನಗಳಲ್ಲಿ ಮೊಹರಂ ಹಬ್ಬವಿದ್ದು , ದೇವರ ಮೂರ್ತಿ ಇಲ್ಲದೆ ಮೊಹರಂ ಹಬ್ಬವನ್ನು ಹೇಗೆ ಮಾಡುವುದು? ಹಬ್ಬ ಮುಗಿದ ನಂತರ ದೇವರುಗಳ ಪತ್ತೆಗೆ ಕ್ರಮ ಕೈಗೊಂಡರೆ ನಮಗೆ ಉಪಯೋಗವೇನು? ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನವಹಿಸಿ ಶೀಘ್ರವಾಗಿ ಕ್ರಮ ಕೈಗೊಂಡು, ಸಹಕರಿಸಬೇಕು” ಎಂದು ಮುಖಂಡ ನಬಿ ಒತ್ತಾಯಿಸಿದ್ದಾರೆ.