ದಲಿತ ಸಭೆಗಳನ್ನು ನಡೆಸುವ ಉದ್ದೇಶ ದಲಿತ ಸಮುದಾಯದ ಕುಂದು ಕೊರತೆಗಳನ್ನು ಆಲಿಸುವುದು. ಸಮಸ್ಯೆಗಳಿಗೆ ಸ್ಪಂದಿಸುವುದಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ದಾವಣಗೆರೆ ನಗರದ ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪೌರ ಕಾರ್ಮಿಕರ ವಸತಿ ಗೃಹದಲ್ಲಿ ಏರ್ಪಡಿಸಿದ್ದ ದಲಿತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳು ದಲಿತ ಸಭೆಗಳನ್ನು ನಡೆಸಲು ಹೆಚ್ಚಿನ ಒತ್ತು ನೀಡುತ್ತಿದ್ದು, ದಲಿತ ಸಭೆಗಳಲ್ಲಿ ದಲಿತರು ತಮ್ಮ ಕುಂದುಕೊರತೆಗಳನ್ನು ತಿಳಿಸುವ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಹೆಚ್ಚು ಪೊಲೀಸರು ಜನರಿಗೆ ಹತ್ತಿರವಾಗಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು” ಎಂದರು.
“ಜನರು ತಮ್ಮ ಸಮಸ್ಯೆಗಳಿಗೆ ಠಾಣೆಗೆ ಭೇಟಿಯಾದಾಗ ಸರಿಯಾಗಿ ಸ್ಪಂದಿಸಬೇಕು. ಒಂದು ವೇಳೆ ನಿಮಗೆ ಸರಿಯಾದ ಸ್ಪಂದನೆ ಸಿಗದೇ ಇದ್ದ ಸಂಧರ್ಭದಲ್ಲಿ ನಾವು ನಿಮ್ಮ ಬಳಿಯೇ ಬಂದು ಈ ರೀತಿ ದಲಿತರ ಕುಂದು ಕೊರತೆಗಳ ಸಭೆಗಳನ್ನು ನಡೆಸಿದಾಗ ನಿಮ್ಮ ಸಮಸ್ಯೆಗಳ ಬಗ್ಗೆ ನೇರವಾಗಿ, ಮುಕ್ತವಾಗಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ” ಎಂದು ತಿಳಿಸಿದರು.
“ದಲಿತ ಸಮುದಾಯವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಿಮ್ಮ ಜವಾಬ್ದಾರಿ. ದಲಿತರ ಶಿಕ್ಷಣಕ್ಕಾಗಿ ಸರ್ಕಾರವು ಕೂಡ ಹಲವು ಯೋಜನೆಗಳು, ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ದಲಿತ ಸಮುದಾಯವು ಮೌಢ್ಯ ಆಚರಣೆಗಳಿಂದ ಹೊರಬರಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.
“ಬಾಲ್ಯ ವಿವಾಹ ಪ್ರಕರಣಗಳು ಇತ್ತೀಚಿ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ. ಆದ್ದರಿಂದ ಕಾನೂನಿಗೆ ವಿರುದ್ಧವಾಗಿ ಚಿಕ್ಕವಯಸ್ಸಿಗೆ ಮಕ್ಕಳನ್ನು ಮದುವೆ ಮಾಡಬಾರದು. ಅವರಿಗೆ ಒಳ್ಳೆಯ ಶಿಕ್ಷಣವನ್ನು ನೀಡಲು ಒತ್ತು ನೀಡಬೇಕು. ಶಿಕ್ಷಣವಂಚಿತರಾದ ಚಿಕ್ಕ ಚಿಕ್ಕ ಮಕ್ಕಳೇ ಇಂದಿನ ದಿನಗಳಲ್ಲಿ ದುಶ್ಚಟಗಳಿಗೆ ಬಲಿಯಾಗಿ, ಅಪರಾಧ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬರುತ್ತಿದೆ. ಮಕ್ಕಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗದಂತೆ ತಡೆಯಲು ಶಿಕ್ಷಣವೊಂದೇ ದಾರಿ. ಆದ್ದರಿಂದ ಕಡ್ಡಾಯವಾಗಿ ನಿಮ್ಮ ನಿಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲು ಮನವಿ ಮಾಡುತ್ತೇನೆ” ಎಂದರು.
“ನಿಮ್ಮ ವ್ಯಾಪ್ತಿಯಲ್ಲಿ ಪೊಲೀಸ್ ಬೀಟ್ ಸಿಬ್ಬಂದಿ ಇದ್ದು ಅವರ ಬಳಿ ತಮ್ಮ ಅಹವಾಲುಗಳನ್ನು ತಿಳಿಸಬಹುದು. ಅಲ್ಲದೇ ನಿಮ್ಮ ಅಕ್ಕ ಪಕ್ಕದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಕೂಡಲೇ ನಿಮ್ಮ ಬೀಟ್ ಸಿಬ್ಬಂದಿ, ಸ್ಥಳೀಯ ಠಾಣೆ ಹಾಗೂ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ತಿಳಿಸಬಹುದಾಗಿದೆ. ಕೂಡಲೇ ನಮ್ಮ ಸಿಬ್ಬಂದಿ ಸ್ಪಂದಿಸುತ್ತಾರೆ” ಎಂದು ಭರವಸೆ ನೀಡಿದರು.
“ಹಿರಿಯರಿಗಾಗಿ ಹಿರಿಯರ ಸಹಾಯವಾಣಿ, ಮಕ್ಕಳಿಗಾಗಿ ಮಕ್ಕಳ ಸಹಾಯವಾಣಿ, ಸೈಬರ್ ಅಪರಾಧಗಳಿಗಾಗಿ ಸೈಬರ್ ಸಹಾಯವಾಣಿ, ತುರ್ತು ಸಹಾಯಕ್ಕಾಗಿ ಸಹಾಯವಾಣಿ 112, ಮಹಿಳಾ ಸುರಕ್ಷತೆಗಾಗಿ ನಗರದಲ್ಲಿ ನೂತನವಾಗಿ ದಾವಣಗೆರೆ ‘ಸುರಕ್ಷಾ’ ಆ್ಯಪ್ ಜಾರಿಗೆ ತರಲಾಗಿದ್ದು, ಸಾರ್ವಜನಿಕರು ಬಳಕೆ ಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇವರ ಮುಂದೆ ಹಚ್ಚಿಟ್ಟಿದ್ದ ದೀಪ – ಇಡೀ ಮನೆಯನ್ನೇ ಸುಟ್ಟಿತು
ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ನಗರ ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ, ಪೊಲೀಸ್ ನಿರೀಕ್ಷಕರುಗಳಾದ ಬಾಲಚಂದ್ರ ನಾಯ್ಕ್, ಗುರುಬಸವರಾಜ, ಪ್ರಭಾವತಿ ಶೇತಸನದಿ, ಸುನೀಲ್ ಕುಮಾರ, ಪಿಎಸ್ಐ ಅಂಜನಪ್ಪ, ಪುಷ್ಪಲತಾ, ಶಮೀಮ್ ಉನ್ನೀಸ, ದಲಿತ ಮುಖಂಡರುಗಳಾದ ಎಲ್ ಎಚ್ ಸಾಗರ್, ಹುಚ್ಚೆಂಗೆಪ್ಪ, ಸೋಮಲಾಪುರದ ಹನುಮಂತಪ್ಪ, ಮಂಜುನಾಥ ಸೇರಿದಂತೆ ದಲಿತ ಮಹಿಳೆಯರು, ಪೌರ ಕಾರ್ಮಿಕರು ಇದ್ದರು.