ಪ್ರಧಾನ ಮಂತ್ರಿ ಆವಾಸ್ ಯೋಜನೆಯು ನಿರಾಶ್ರಿತರಿಗೆ ಸೂರು ಕಲ್ಪಿಸುವ ಉದ್ದೇಶ ಹೊಂದಿದೆ. ಪ್ರತಿ ಹಳ್ಳಿಯಲ್ಲಿರುವ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಬೇಕು ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ತಿಳಿಸಿದರು.
ದಾವಣಗೆರೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. “ಜಿಲ್ಲೆಯಲ್ಲಿ 966 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಯಾವುದೇ ಜಾತಿ ಭೇದವಿಲ್ಲದೆ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಒದಗಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿಗಳಾಗುತ್ತವೆ. ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ನಿರ್ವಹಿಸಬೇಕು” ಎಂದು ಸೂಚನೆ ನೀಡಿದರು.
“ಹೊನ್ನಾಳಿ ಪಟ್ಟಣ ಪಂಚಾಯಿತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿದ್ದು, ಘಟಕಕ್ಕೆ ಹಗಲು ರಾತ್ರಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸಮುದಾಯ ಶೌಚಾಲಯಗಳಲ್ಲಿ ಸ್ವಚ್ಛತೆ ಹಾಗೂ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು” ಎಂದು ತಿಳಿಸಿದರು.
“ಜಲಜೀವನ್ ಮಿಷನ್ ಯೋಜನೆಯಡಿ ಗುಣಮಟ್ಟದ ನಳ, ಪೈಪುಗಳ ಅಳವಡಿಕೆ ಮತ್ತು ದುರಸ್ತಿಗೊಂಡಿರುವ ನಳ ಸಂಪರ್ಕಗಳನ್ನು ಸರಿಪಡಿಸಬೇಕು. ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಕುರಿತು ಮಾಹಿತಿ ಕೊರತೆ ಇದ್ದು, ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಪ್ರಚಾರ ಮಾಡಿ ನೋಂದಣಿ ಹಾಗೂ ವಿಮಾ ಸೌಲಭ್ಯ ಒದಗಿಸುವಂತೆ ಕೃಷಿ ಇಲಾಖೆಯಿಂದ ಕೈಗೊಳ್ಳಬೇಕು. ಬಿತ್ತನೆಬೀಜ, ಗೊಬ್ಬರ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ವರ್ಷ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲು ಆದ್ಯತೆ ನೀಡಬೇಕು” ಎಂದು ಸೂಚನೆ ನೀಡಿದರು.
“ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಇಕೆವೈಸಿ ಮಾಡಿಸದೇ ಇರುವ ರೈತರನ್ನು ಗುರುತಿಸಿ ನೋದಣಿ ಮಾಡಿಸಬೇಕು. ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಆಹಾರ, ಅಡುಗೆ ಕೊಠಡಿಯನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು. ಅಂಗನವಾಡಿ ಕೇಂದ್ರಗಳಿಂದ ಮಹಿಳೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ಹಾಗೂ ಉತ್ತಮ ಗುಣಮಟ್ಟದ ಮೊಟ್ಟೆಗಳು ಪೂರೈಕೆಯಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಿಮ್ಸ್ ನಿರ್ದೇಶಕರ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ
ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, “ರಾಜ್ಯದ ಕೆಲವು ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಹಾಗೂ ಕಡಿಮೆ ತೂಕದ ಮೊಟ್ಟೆಗಳು ಸರಬರಾಜಾಗುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಈ ತರಹದ ದೂರುಗಳಿದ್ದಲ್ಲಿ ಮೇಲಾಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಬೇಕು” ಎಂದರು.
ಹರಿಹರ ಶಾಸಕ ಬಿ ಪಿ ಹರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಕೆ ಇಟ್ನಾಳ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಡಾ. ಎ ಚನ್ನಪ್ಪ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಸೌಮ್ಯಶ್ರೀ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.