ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳಲ್ಲಿ ಅಗತ್ಯ ಪ್ರಮಾಣದ ನೇಮಕಾತಿ ಆಗಬೇಕು ಮತ್ತು ಬ್ಯಾಂಕ್ ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್‌ನ ಜಂಟಿ ಕಾರ್ಯದರ್ಶಿ ಸ್ಟೀಫನ್ ಜಯಚಂದ್ರ ಆಗ್ರಹಿಸಿದರು.
ದಾವಣಗೆರೆಯಲ್ಲಿ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಮತ್ತು ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
“ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಬ್ಯಾಂಕ್ ನೌಕರರ ಸಂಘಟನೆಯಾಗಿದೆ. ಕಳೆದ 77 ವರ್ಷಗಳಿಂದ ಬ್ಯಾಂಕ್ ಉದ್ಯೋಗಿಗಳಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಆದರೆ ಇಂದು ಬ್ಯಾಂಕ್‌ಗಳ ಉಳಿವಿಗಾಗಿ ಹೋರಾಟ ಮಾಡುತ್ತಿದೆ. ಬ್ಯಾಂಕಿಂಗ್ ಸೌಲಭ್ಯವು ಈ ದೇಶದ ಮೂಲೆ ಮೂಲೆಗೂ ತಲುಪಬೇಕು. ಗ್ರಾಹಕರಿಗೆ ಅತ್ಯುತ್ಕೃಷ್ಟ ಸೇವೆಯೂ ಸಿಗಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ. ಈ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಹೋರಾಟಕ್ಕೆ ಸಿದ್ಧವಾಗಿದೆ” ಎಂದು ಹೇಳಿದರು.
ಸಂಘಟನೆಯ ಜಂಟಿ ಕಾರ್ಯದರ್ಶಿ ಹಾಗೂ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ನಾಯರಿ ಮಾತನಾಡಿ, “ಬ್ಯಾಂಕ್‌ಗಳಲ್ಲಿ ಖಾಲಿ ಇರುವ 2 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಲು, ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಮತ್ತು ಹೊರಗುತ್ತಿಗೆ ಪದ್ಧತಿಯನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇತಿಹಾಸದಲ್ಲೇ ಪ್ರಪ್ರಥಮವಾಗಿ 4 ತಿಂಗಳುಗಳ ಕಾಲದ ಸುದೀರ್ಘವಾದ ಹೋರಾಟದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಬ್ಯಾಡ್ಜ್ ಧರಿಸುವುದು, ಟ್ವಿಟರ್ ಅಭಿಯಾನ, ಜಿಲ್ಲಾವಾರು ಸದಸ್ಯರ ಸಭೆ, ಸರಕಾರಕ್ಕೆ ಮನವಿ ಸಲ್ಲಿಸುವುದು, ಬ್ಯಾಂಕ್‌ವಾರು ಮುಷ್ಕರ, ರಾಜ್ಯವಾರು ಮುಷ್ಕರ, ಅಖಿಲ ಭಾರತ ಬ್ಯಾಂಕ್ ಮುಷ್ಕರ ಮೊದಲಾದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರವು ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ” ಎಂದು ಕೆ ರಾಘವೇಂದ್ರ ನಾಯರಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಚ್ ಜಿ ಉಮೇಶ್ ಅವರಗೆರೆ ಮಾತನಾಡಿ, “ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡಿದ್ದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇಂದು ಬ್ಯಾಂಕ್‌ಗಳ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ಸರ್ಕಾರದ ರಾಷ್ಟ್ರೀಕರಣ ವಿರೋಧಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಎಐಬಿಇಎಯ ಈ ರಾಷ್ಟ್ರವ್ಯಾಪಿ ಹೋರಾಟಕ್ಕೆ ಎಐಟಿಯುಸಿ ಸಂಘಟನೆ ಬೆಂಬಲ ನೀಡಿ ಹೋರಾಟದಲ್ಲಿ ಭಾಗವಹಿಸಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಡಯಾಲಿಸಿಸ್ ರೋಗಿ ಸಾವು; ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ಆರೋಪ
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಕಾರ್ಮಿಕ ಮುಖಂಡ ಆರ್ ಆಂಜನೇಯ, ಬ್ಯಾಂಕ್ ಕಾರ್ಮಿಕ ಮುಖಂಡಋುಗಳಾದ ಮೋಹನ್ ಹೊಂಬಾಳೆ, ಎಚ್ ಎಸ್ ತಿಪ್ಪೇಸ್ವಾಮಿ, ಕೆ ವಿಶ್ವನಾಥ ಬಿಲ್ಲವ, ಎಂ ಎಂ ಸಿದ್ದಲಿಂಗಯ್ಯ, ಕೆ ರವಿಶಂಕರ್, ಪರಶುರಾಮ್, ಕೆ ಶಶಿಶೇಖರ್, ಅಜಯ್ ಕುಮಾರ್, ಶ್ರೀನಿವಾಸ ನಾಡಿಗ್, ಅಣ್ಣಪ್ಪ ನಂದಾ, ಸತೀಶ್, ಪ್ರಶಾಂತ್, ಜಗಳೂರು ತಿಪ್ಪೇಸ್ವಾಮಿ, ಡಿ ಎ ಸಾಕಮ್ಮ, ಅಮೃತಾ, ಜಯಲಕ್ಷ್ಮಿ, ಉಷಾ, ಸಂದೀಪ್, ಮನು ಭಾರದ್ವಾಜ್ ಹಾಗೂ ಬ್ಯಾಂಕ್ ನಿವೃತ್ತ ನೌಕರರ ಸಂಘದ ಅಜಿತ್‌ಕುಮಾರ್ ನ್ಯಾಮತಿ, ಜಿ ಬಿ ಶಿವಕುಮಾರ್, ಎಚ್ ಸುಗೀರಪ್ಪ, ಗುಡ್ಡಪ್ಪ ಸೇರಿದಂತೆ ಇತರರು ಇದ್ದರು.