ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವು ದಾವಣಗೆರೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಜನವರಿ 5 ಮತ್ತು 6 ರಂದು ದಾವಣಗೆರೆ ನಗರದ ಬಾಪೂಜಿ ಎಂಬಿಎ ಮೈದಾನದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಮೋತಿ ವೀರಪ್ಪ ಕಾಲೇಜು ಮುಂಭಾಗದ ಗುಂಡಿ ವೃತ್ತದಿಂದ ಸಾವಿರಾರು ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಜಾಥಾ ನಡೆಸಲಾಯಿತು.
ಯುವಜನೋತ್ಸವ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಣಾಧಿಕಾರಿ ಡಾ.ಸುರೇಶ್ ಬಿ ಇಟ್ನಾಳ್, “ದಾವಣಗೆರೆ ಜಿಲ್ಲೆಯ ಯುವಕರು, ಯುವತಿಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜ್ಞಾನ ವಸ್ತು ಪ್ರದರ್ಶನ, ಕವನ ರಚನೆ, ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಚಿತ್ರಕಲೆ, ಘೋಷಣಾ ಸ್ಪರ್ಧೆಗಳ ಜೊತೆಗೆ ಸಂಜೆ ನಡೆಯುವ ಮಣಿಕಾಂತ್ ಕದ್ರಿಯವರ ಸಂಗೀತ ಕಾರ್ಯಕ್ರಮ ವೀಕ್ಷಣೆ ಮಾಡುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
ಜಾಥಾದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿವಿಧ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ‘ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ’ ‘ನೀರನ್ನು ಉಳಿಸಿ ಭೂಮಿಯನ್ನು ರಕ್ಷಿಸಿ’ ‘ಸ್ವಚ್ಚ ಮತ್ತು ಹಸಿರು ಅದು ನಮ್ಮ ಕನಸು’ ಮತ್ತು ‘ಉಸಿರಾಡಲು ಪ್ರೀತಿಸಿ, ಮರಗಳನ್ನು ಉಳಿಸಿ’ ‘ಮಾಲಿನ್ಯವನ್ನು ಉಳಿಸಿ, ಬದುಕಲು ಪ್ರಾರಂಭಿಸಿ’. ವಿದ್ಯಾರ್ಥಿನಿಯರು ‘ಹಣದಾಸೆಗೆ ಬಲಿಯಾಗದೆ ಯೋಚಿಸಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಿ’ ಎಂದು ಘೋಷಣೆಗಳೊಂದಿಗೆ ಜಾಥಾದಲ್ಲಿ ಭಾಗವಹಿಸಿದರು.

ಕಾಲ್ನಡಿಗೆ ಜಾಥಾದಲ್ಲಿ ಅತ್ಯುತ್ತಮವಾಗಿ ತಂಡವನ್ನು ಸಂಘಟಿಸಿದ ಉತ್ತಮ ತಂಡಕ್ಕೆ ‘ಅಭಿನಂದನಾ ಪತ್ರ’ವನ್ನು ಹರಿಹರ ಶಾಸಕರಾದ ಬಿ.ಪಿ ಹರೀಶ್ ವಿತರಿಸಿ “ಯುವಜನತೆ ಯುವಜನೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅದರ ಅನುಕೂಲತೆಗಳ ಬಗ್ಗೆ ತಿಳಿದುಕೊಂಡು ದೇಶದ ಪ್ರಗತಿಗೆ ಪೂರಕವಾಗಿ ಶ್ರಮಿಸಬೇಕು” ಎಂದು ಕರೆ ನೀಡಿದರು.
ಜಾಥಾವು ಗುಂಡಿ ವೃತ್ತದಿಂದ ವಿದ್ಯಾರ್ಥಿಭವನ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಮಹಾನಗರಪಾಲಿಕೆ ಮುಂಭಾಗದಿಂದ ಎವಿ ಕಮಲಮ್ಮ ರಸ್ತೆಯ ಮೂಲಕ ಮೋತಿ ವೀರಪ್ಪ ಕಾಲೇಜಿನ ಆವರಣ ತಲುಪಿತು. ಜಾಥಾದಲ್ಲಿ 75 ವರ್ಷದ ಹಿರಿಯ ವ್ಯಕ್ತಿ ನಾಗರಾಜ್ ಭಾಗವಹಿಸಿದುದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.
ಇದನ್ನು ಓದಿದ್ದೀರಾ? ವಿಜಯಪುರ | ತೊಗರಿ ಬೆಲೆಗೆ ಹೆಚ್ಚಿನ ಬೆಲೆ ನೀಡಲು ಆಗ್ರಹಿಸಿ ರೈತರಿಂದ ಪ್ರತಿಭಟನೆ
ಕಾಲ್ನಡಿಗೆ ಜಾಥಾದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಸಿಪಿಓ ಮಲ್ಲಾನಾಯ್ಕ್, ಡಿಡಿಪಿಯು ಕರಿಸಿದ್ದಪ್ಪ, ಡಿಡಿಪಿಐ ಕೊಟ್ರೇಶ್, ಡಿಆರ್‍ಸಿಎಸ್ ಮಧುಶ್ರೀನಿವಾಸ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ, ಯುವ ಪ್ರಶಸ್ತಿ ಪುರಸ್ಕೃತ ಮಾಗನಹಳ್ಳಿ ಮಂಜುನಾಥ್ ಮತ್ತು ನಗರದ ಪದವಿಪೂರ್ವ, ಪದವಿ ಕಾಲೇಜುಗಳ ವಿದ್ಯಾರ್ಥಿಗಳು , ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರಿ ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

